ಮೈಸೂರು : ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಲ್ಲಿನ ನಂಜನಗೂಡು ತಾಲೂಕಿನ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಮನು ಎಂಬವರು ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ನಂಜನಗೂಡು ತಾಲೂಕಿನ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಚಿರತೆಯನ್ನು ಕಂಡಿದ್ದಾರೆ. ಬಳಿಕ ಮೊಬೈಲಿನಲ್ಲಿ ಚಿರತೆಯನ್ನು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ತಿಳಿದ ಶೆಟ್ಟಹಳ್ಳಿ ಮತ್ತು ದುಗ್ಗಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು,ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಜೊತೆಗೆ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಕೂಡಲೇ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಮೀನಿನಲ್ಲಿ ಮೇಯುತ್ತಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹಳೆ ಕುಕ್ಕೂರು ಗ್ರಾಮದಲ್ಲಿ ನಡೆದಿದೆ. ಸಿಕಂದರ್ ಪಾಷಾ ಎಂಬವರಿಗೆ ಸೇರಿದ ಕರುವನ್ನು ಚಿರತೆ ತಿಂದು ಹಾಕಿದೆ. ಚಿರತೆ ದಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದಾರೆ. ಕುಕ್ಕೂರು ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ದನ ಕರುಗಳ ಮೇಲೆ ಚಿರತೆಗಳು ದಾಳಿ ಸಾಮಾನ್ಯ ಎಂಬಂತಾಗಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.