ರಾಮನಗರ: ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಜನತಾ ದರ್ಶನ ಕಾರ್ಯಕ್ರಮದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಲು ಇಡೀ ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ಅವರು ಇಂದು ಕನಕಪುರ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ. ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು ಹಾಗೂ ಸಾರ್ವಜನಿಕ ಕುಂದುಕೊರತೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಇಲ್ಲವಾದಲ್ಲಿ ಸಂಬಂಧ ಪಟ್ಟ ಇಲಾಖೆಗೆ ಅರ್ಜಿಯನ್ನು ವರ್ಗಾವಣೆ ಮಾಡಿ, ಸಮಸ್ಯೆಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸರ್ವೆಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚು ಬರುತ್ತಿದ್ದು, ಈ ಹಿಂದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿಯೂ ಸಹ ಸರ್ವೆಗೆ ಸಂಬಂಧಿಸಿದಂತೆ ಬಹಳ ಅರ್ಜಿಗಳು ಸ್ವೀಕೃತವಾಗಿದೆ. ರಾಜ್ಯ ಸರ್ಕಾರ ರಾಜ್ಯಾದ್ಯಂತ ಮರು ಸರ್ವೇ ಕಾರ್ಯವನ್ನು ಕೈಗೊಂಡಿದೆ, ಮರು ಸರ್ವೆ ಕಾರ್ಯವು ರಾಜ್ಯದಲ್ಲಿ ಮೊದಲು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮದಿಂದಲೇ ಶುರುವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು. ೬೦ ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಪಿಂಚಣಿ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಗೆಹರಿಸಲಾಗುವುದು ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಪ್ರತಿ ಹಳ್ಳಿಯಲ್ಲಿಯೂ ಸಾರ್ವಜನಿಕ ಸ್ಮಶಾನ ನಿರ್ಮಿಸಲಾಗಿದೆ. ಸಾರ್ವಜನಿಕ ಸ್ಮಶಾನ ಇಲ್ಲದ ಹಳ್ಳಿಗಳಲ್ಲಿ ಪಕ್ಕದ ಹಳ್ಳಿಯ ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕ ಸ್ಮಶಾನವನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗದ ಕೊರತೆ ಇದ್ದು. ಆ ಗ್ರಾಮದಲ್ಲಿರುವ ಸರ್ಕಾರಿ ಜಾಗದ ಮಾಹಿತಿಯನ್ನು ಸಾರ್ವಜನಿಕರು ನೀಡಿದರೆ ಸದರಿ ಸರ್ಕಾರಿ ಜಾಗದಲ್ಲಿಯೇ ಸಾರ್ವಜನಿಕ ಸ್ಮಶಾನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಇಂದು ಒಟ್ಟು ೨೭ ಅರ್ಜಿಗಳು ಸ್ವೀಕೃತವಾಗಿದ್ದು, ಎಲ್ಲಾ ಅರ್ಜಿಗಳು ಸ್ಥಳದಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದರು. ಕಂದಾಯ ಇಲಾಖೆಗೆ ಸಂಬಂಧಿಸಿದ ಪಿಂಚಣಿಗಳ ಸಮಸ್ಯೆಯನ್ನು ಹೋಬಳಿ ಮಟ್ಟದಲ್ಲಿ ಪರಿಹಾರ ನೀಡಲು ಒಂದು ಕಾರ್ಯಕ್ರಮವನ್ನು ಆಯೋಜಿಸಲು ಕ್ರಮ ವಹಿಸಲಾಗುವುದು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಕಾರ್ತಿಕ್ ರೆಡ್ಡಿ, ರಾಮನಗರ ಉಪವಿಭಾಗಾಧಿಕಾರಿ ಬಿನೋಯ್, ಕನಕಪುರ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ, ಕನಕಪುರ ತಹಶೀಲ್ದಾರರಾದ ಡಾ. ಸ್ಮಿತಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃ?ಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸತೀಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
