ಪಿರಿಯಾಪಟ್ಟಣ: ಬಾರವಿ ಕಾವೇರಿ ಕನ್ನಡ ಸಂಘ ವತಿಯಿಂದ ತಾಲೂಕಿನ ಗಡಿಭಾಗ ಕೊಪ್ಪ ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಕಾವೇರಮ್ಮ ಪ್ರತಿಮೆ ಆವರಣದಲ್ಲಿ 11ನೇ ವರ್ಷದ ಕಾವೇರಿ ಸಂಕ್ರಮಣದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಬುಧವಾರ ಮುಂಜಾನೆಯಿಂದಲೇ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಶ್ರೀ ಕಾವೇರಮ್ಮ ಮೂರ್ತಿಗೆ ವಿವಿಧ ಬಗೆ ಅಭಿಷೇಕ ಮಾಡಿ ಪುಷ್ಪಾಲಂಕಾರ ಬಳಿಕ ಮಹಾ ಮಂಗಳಾರತಿ ನಡೆಸಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ತೀರ್ಥ ಪ್ರಸಾದ ವಿತರಿಸಲಾಯಿತು.
ಕಾವೇರಮ್ಮ ಪ್ರತಿಮೆ ಆವರಣ ಹಾಗೂ ನದಿ ಸೇತುವೆಯನ್ನು ಕನ್ನಡ ಬಾವುಟ ಹಾಗೂ ವಿದ್ಯುತ್ ದೀಪ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು, ಸತೀಶ್ ಮತ್ತು ತಂಡದವರಿಂದ ನಾದಸ್ವರ ಸಂಗೀತ ಕಾರ್ಯಕ್ರಮ ನಡೆಯಿತು.ಈ ವೇಳೆ ಕಾವೇರಮ್ಮ ಪ್ರತಿಮೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾವೇರಮ್ಮ ಅನ್ನಸಂತರ್ಪಣ ಭವನದ ಉದ್ಘಾಟನೆಯನ್ನು ಕುಶಾಲನಗರದ ಎಸ್ಎಲ್ಎನ್ ಉದ್ಯಮದ ಮಾಲೀಕರಾದ ಸಾತಪ್ಪನ್ ನೆರವೇರಿಸಿ ಶುಭಕೋರಿದರು.

ಮಡಿಕೇರಿ ಶಾಸಕರಾದ ಮಂತರ್ ಗೌಡ ಅವರು ಪೂಜಾ ಕಾರ್ಯಕ್ರಮ ವೇಳೆ ಭೇಟಿ ನೀಡಿ ಮಾತನಾಡಿ ಕಾವೇರಿ ಮಾತೆ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ರೈತರ ಬಾಳು ಬೆಳಗುವ ಮೂಲಕ ಕನ್ನಡ ನಾಡು ಸಂಪತ್ಭರಿತವಾಗುವಂತೆ ಪ್ರಾರ್ಥಿಸಿ ಬಾರವಿ ಸಹೋದರರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕಾವೇರಮ್ಮ ಅನ್ನಸಂತರ್ಪಣ ಭವನಕ್ಕೆ ಸರ್ಕಾರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕೈಲಾಶ್ ಕಮೊಡಿಟಿಸ್ ಮಾಲೀಕರಾದ ಬಿ.ಕೆ ಸುದೀಪ್ ಕುಮಾರ್ ಹಾಗೂ ಎಸ್ಎಲ್ಎನ್ ಉದ್ಯಮದ ಮಾಲೀಕರಾದ ವೆಂಕಟಾಚಲ ಅವರು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಶುಭ ಕೋರಿದರು.
ಬಾರವಿ ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್ ಅವರು ಮಾತನಾಡಿ ಬಾರವಿ ಸಹೋದರರ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 11 ವರ್ಷಗಳಿಂದ ತುಲಾ ಸಂಕ್ರಮಣ ಪ್ರಯುಕ್ತ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ತಂದು ಕಾವೇರಿ ಅಮ್ಮನ ಪ್ರತಿಮೆ ಬಳಿ ಭಕ್ತಾದಿಗಳಿಗೆ ವಿತರಿಸಿ ಅನ್ನ ಸಂತರ್ಪಣೆ ನಡೆಸಲಾಗುತ್ತಿದ್ದು ಇದಕ್ಕೆ ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.
ಈ ಸಂದರ್ಭ ಪಾರವಿ ಕನ್ನಡ ಸಂಘದ ಅಧ್ಯಕ್ಷರಾದ ಬಬಿಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಪಿರಿಯಾಪಟ್ಟಣ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ ರಾಜೇಗೌಡ, ಜೆಡಿಎಸ್ ಮುಖಂಡರಾದ ಜಯಂತಿ ಸೋಮಶೇಖರ್, ಮುಖಂಡರಾದ ಮಹದೇವ್, ಚಂದ್ರು, ಜಬಿಉಲ್ಲಾ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಇದ್ದರು.
