ಚಾಮರಾಜನಗರ: ಸರಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ರೂಪಿಸಿ, ಜಾರಿಗೆ ತಂದಿದ್ದು, ಇವುಗಳ ಬಗ್ಗೆ ಹೆಣ್ಣು ಮಕ್ಕಳು ಅರಿವು ಹೊಂದುವುದರೊಂದಿಗೆ ಅವುಗಳ ಉಪಯುಕ್ತತೆಯನ್ನು ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಎಸ್. ಭಾರತಿ ಅವರು ಸಲಹೆ ಮಾಡಿದರು.
ನಗರದ ಜೆ. ಎಸ್ ಎಸ್. ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜೆಎಸ್‌ಎಸ್ ವಿದ್ಯಾಸಂಸ್ಥೆ, ಹಾಗೂ ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾನೂನುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವಯುತವಾದ ಸ್ಥಾನಮಾನವಿದೆ. ಪ್ರಸ್ತುತ ದಿನಮಾನದಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತರಾಗುವುದರ ಜೊತೆಗೆ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಲಿದ್ದು, ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ.ಆದರೂ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯೊಬ್ಬರೂ ಜಾಗೃತರಾಗಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ ದೇಶದಲ್ಲಿ ಎಷ್ಟೇ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ದಿನೇ ದಿನೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯಗಳು, ವರದಕ್ಷಿಣೆ ಕಿರುಕುಳ, ಅತ್ಯಾಚಾರಗಳು ನಡೆಯುತ್ತಿವೆ.ಇವುಗಳನ್ನು ತಡೆಗಟ್ಟಲು ಮಹಿಳೆಯ ಕನಿಷ್ಠ ಕಾನೂನುಗಳನ್ನು ತಿಳಿಯುವುದರ ಜೊತೆಗೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು. ಇಂದಿನ ವಿದ್ಯಾರ್ಥಿಗಳು ಸಿನಿಮಾ, ಧಾರವಾಹಿ, ಮೊಬೈಲ್ ಬಳಕೆಯಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ವಿಚಾರಗಳಿಗೆ ಮೊಬೈಲ್ ಬಳಕೆ ಮಾಡಿ, ಕೆಟ್ಟದರಿಂದ ದೂರವಿರಿ ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಕೆ. ವಿರೂಪಾಕ್ಷ ಸ್ವಾಮಿ ಮಾತನಾಡಿ ಸಮಾಜದಲ್ಲಿ ನಡೆಯುವ ಬಾಲ್ಯ ವಿವಾಹ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಜಿ. ಸಿದ್ದರಾಜು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಂತಹ ಕಾನೂನು ಅರಿವು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಸಮಾಜದ ಸುತ್ತಮುತ್ತ ನಡೆಯುವ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎ. ಆರ್. ಸುಷ್ಮಾ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯಿದೆಗೆ ಸಂಬಂಧಿಸಿದ ಎರಡು ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.