ಮೈಸೂರು: ಬರೆದಂತೆ ಬದುಕುವುದು ನಮ್ಮ ಹೊಣೆಗಾರಿಕೆ. ಸಾಹಿತ್ಯ ಬರೆಯುವ ಪ್ರತಿಯೊಬ್ಬರಿಗೂ ಕೂಡ ಸಾಮಾಜಿಕ ಜವಾಬ್ದಾರಿ ಇದೆ ಎಂದು ಖ್ಯಾತ ಕವಿಗಳಾದ ಎಸ್.ಜಿ.ಸಿದ್ದರಾಮಯ್ಯ ಅವರು ತಿಳಿಸಿದರು.
ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕವಿಗೋಷ್ಠಿಯ ಮೂರನೇ ದಿನವಾದ ಇಂದು ಪ್ರಾದೇಶಿಕ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾಗತಿಕ ವಾತಾವರಣದೊಳಗೆ ನಾವು ಯಾರೂ ಕೂಡ ಸಂತೋಷ ಪಡುವಂತಹ ಸ್ಥಿತಿಯಲ್ಲಿ ಇಲ್ಲ. ನಮ್ಮ ದೇಶವನ್ನು ಒಳಗೊಂಡಂತೆ ಇಡೀ ಜಗತ್ತಿನ ವ್ಯಾಪ್ತಿಯ ಒಳಗೆ ನೋಡಿದರೆ ಮಕ್ಕಳ ಮೇಲೆ ಮಹಿಳೆಯರ ಮೇಲೆ ಆಗುತ್ತಿರುವಂತಹ ಹಲ್ಲೆಯಿಂದ ಹಿಡಿದು ಯುದ್ಧವನ್ನು ಉಂಟು ಮಾಡುತ್ತಿರುವ ಭೀತಿ ಮತ್ತು ಅಮಾನವೀಯತೆಯ ವಿಜೃಂಭಣೆಯನ್ನು ನೋಡಿದಾಗ ಮಾತು ಕಟ್ಟುತ್ತದೆ. ಜಗತ್ತಿನ ಯಾವ ಮೂಲೆಯೂ ಕೂಡ ಸುರಕ್ಷಿತವಾಗಿ ಉಳಿಯಲಾರದ ಪರಿಸ್ಥಿತಿಯೊಳಗಿನ ವಾತಾವರಣ ಇಂದು ಉಂಟಾಗಿದೆ. ಜನಾಂಗೀಯ ದ್ವೇಷ ಇಂದು ಇಡೀ ಜಗತ್ತಿಗೆ ವ್ಯಾಪಿಸಿದೆ ಎಂದರು.
ಕಾವ್ಯಕ್ಕೆ, ಸಾಹಿತ್ಯಕ್ಕೆ, ಕಲೆಗೆ ಒಂದು ಹೊಣೆಗಾರಿಕೆ ಇದೆ ಅದು ಸಾಮಾಜಿಕ ಹೊಣೆಗಾರಿಕೆ. ಯಾವುದೇ ಭಾಷೆಯ ಸಾಹಿತ್ಯ, ಕಲೆ ಅನ್ನುವುದು ಕೇವಲ ಭಾಷೆಗೆ ಮಾತ್ರ ಸೀಮಿತವಾದಂತೆ ಮಾತನಾಡುವುದಿಲ್ಲ. ಅದು ವಿಶ್ವ ವ್ಯಾಪ್ತಿಯೊಳಗೆ ಲೋಕದರ್ಶನವನ್ನು ಕಟ್ಟಿಕೊಡುತ್ತದೆ. ಈಗಿನ ವಾತಾವರಣದೊಳಗಿನ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಂತಹ ಮನಸ್ಸುಗಳ ಮಾತುಗಳನ್ನು ಪತ್ರಿಕೆಗಳಲ್ಲಿ ನಾವು ಕಾಣಬಹುದು ಎಂದರು.
ಜಗದ್ಗುರುಗಳು ಎಂದು ಅನಿಸಿಕೊಂಡವರು ಕೂಡ ಅವರವರ ಜಾತಿಗೆ ಜಗದ್ಗುರುಗಳೆ ಹೊರತು ನಿಜವಾದ ಜಗತ್ತಿಗೆ ಗುರುಗಳಲ್ಲ. ನಮಗೆ ನಮ್ಮ ಬರಹಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ನಾವು ಬದುಕಿದರೆ ಮಾತ್ರ ನಮಗೆ ಮಾತನಾಡುವ ನೈತಿಕ ಶಕ್ತಿ ಮತ್ತು ಧೈರ್ಯ ಇರುತ್ತದೆ ಎಂದರು.
ಯಾವುದೇ ರಾಜಕಾರಣವೂ ಕೂಡ ಕಲೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸಬಾರದು ಕಲೆ ಮತ್ತು ಸಂಸ್ಕೃತಿಯನ್ನು ಆರೋಗ್ಯಕರವಾಗಿ ಉಳಿಸಿದಷ್ಟು ಅದು ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸುತ್ತದೆ. ಇಂತಹ ವಾತಾವರಣ ಸೃಷ್ಟಿಯಾಗಲಿ. ದಸರಾ ಕವಿಗೋಷ್ಠಿಯು ನಾಡಿನ ಶಾಂತಿಯನ್ನು ಹಾರಿಸುವ ಕಡೆಗೆ ಧನಿ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕವಿಗೋಷ್ಠಿಯ ಕಾರ್ಯಾಧ್ಯಕ್ಷರಾದ ಡಾ.ಎಸ್.ವಿಜಯ್ ಕುಮಾರಿ ಕರಿಕಲ್, ಖ್ಯಾತ ಸಾಹಿತಿ ಡಾ.ಎಚ್.ಟಿ ಪೋತೆ, ಖ್ಯಾತ ಕವಯತ್ರಿಯಾದ ಚ.ಸರ್ವಮಂಗಳ, ಪ್ರಾದೇಶಿಕ ಕವಿಗೋಷ್ಠಿ ಉಪಸಮಿತಿಯ ವಿಶೇಷ ಅಧಿಕಾರಿ ಡಾ.ಎಂ.ದಾಸೇಗೌಡ ಮತ್ತು ಉಪಸಮಿತಿಯ ಅಧ್ಯಕ್ಷರು ಮಹೇಶ್ ಅಂಬಲಾರೆ ಹಾಗೂ ಉಪಾಧ್ಯಕ್ಷರುಗಳಾದ ದಂಡಿನ ಕೆರೆ ನಾಗರಾಜು, ರವಿಚಂದ್ರನ್ ಇತರರು ಉಪಸ್ಥಿತರಿದ್ದರು.