ಬೆಂಗಳೂರು: ಕ್ಯಾಸಿನೋ ಆಟಕ್ಕಿಳಿದು ನಷ್ಟಕ್ಕೊಳಗಾಗಿ ಲಕ್ಷಾಂತರ ರೂ. ಸಾಲ ತೀರಿಸಲು ಮನೆ ಕಳವು ಮಾಡಿದ ಆರೋಪದಡಿ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ಸೇವೆಯಿಂದ ವಜಾಗೊಳಿಸಲು ಪೊಲೀಸ್ ಇಲಾಖೆ ಶಿಫಾರಸು ಮಾಡಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮೂಲದ ಯಲ್ಲಪ್ಪ ೨೦೨೩ರ ಫೆಬ್ರವರಿಯಲ್ಲಿ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಅಭಿಷೇಕ್ ಅಲಿಯಾಸ್ ಅಭಿ ಜತೆ ಸೇರಿ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಆದರೆ, ಕಚೇರಿಯಲ್ಲಿಟ್ಟಿದ್ದ ಅಲಾರಾಂ ಗಂಟೆ ಜೋರಾಗಿ ಶಬ್ಧ ಮಾಡಿದ್ದರಿಂದ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಭಿಯನ್ನು ಬಂಧಿಸಲಾಗಿತ್ತು. ಈ ವೇಳೆ ಕಾನ್‌ಸ್ಟೇಬಲ್ ಕೃತ್ಯ ಬಯಲಾಗಿದೆ. ಆದರೆ, ಅಷ್ಟರಲ್ಲಿ ಯಲ್ಲಪ್ಪ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ. ಹೀಗಾಗಿ ಆರೋಪಿಯನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು.
ಮೇ ತಿಂಗಳಿನಲ್ಲಿ ತನ್ನ ಅಮಾನತು ಆದೇಶ ಹಿಂಪಡೆದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು. ಈ ನಡುವೆಯೂ ಅ.೩ರಂದು ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಯಲ್ಲಪ ಬೈಕ್‌ನಲ್ಲಿ ಮನೆಗೆ ಹೋಗಿದ್ದು ಕಂಡುಬಂದಿತ್ತು. ಈ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿಚಾರಣೆ ವೇಳೆ ಆಗಸ್ಟ್‌ನಲ್ಲಿ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಅಂಚೆ ಕಚೇರಿಯಲ್ಲಿ ೨೭ ಸಾವಿರ ರೂ. ಕಳವು ಪ್ರಕರಣ ಹಾಗೂ ಸೆಪ್ಟೆಂಬರ್‌ನಲ್ಲಿ ಚಂದ್ರಾಲೇಔಟ್‌ನಲ್ಲಿ ಬೀಗ ಒಡೆದು ಮನೆ ಕಳವು ಮಾಡಿರುವ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಈ ನಡುವೆ ವಿಚಾರಣೆಯಲ್ಲಿ ಆರೋಪಿ ಪೊಲೀಸರಿಗೆ ಬೆದರಿಕೆ ಹಾಕಿದ್ದು, ಹಣ ನೀಡುವುದಾಗಿಯೂ ಆಮಿಷವೊಡ್ಡಿದ್ದಾನೆ ಎಂದು ಗೊತ್ತಾಗಿದೆ. ತಾನು ಕದ್ದ ಎಲ್ಲಾ ಚಿನ್ನಾಭರಣಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ. ಆದರೆ, ಪೊಲೀಸರು ಸರಿಯಾಗಿ ರಿಕವರಿ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದ. ನಿರಂತರ ಅಪರಾಧ ಕೃತ್ಯಗಳ ಭಾಗಿಯಾದ ಹಿನ್ನೆಲೆಯಲ್ಲಿ ಆತನನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.