ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಆಯುಧ ಪೂಜಾ ಕಾರ್ಯಕ್ರಮ ಜರುಗಿತು.
ಹಬ್ಬದ ವಿಶೇಷ ಕಚೇರಿಯನ್ನು ಬಣ್ಣ ಬಣ್ಣದ ರಂಗೋಲಿಯಿಂದ ಅಲಂಕರಿಸಿ ತಳಿರು ತೋರಣ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪುರೋಹಿತರಾದ ಹರಳಹಳ್ಳಿ ಗುರುಮಠದ ಶ್ರೀಕಂಠಾರಾಧ್ಯ ಶಾಸ್ತ್ರಿಗಳ ನೇತೃತ್ವ ಗಂಗಾ ಪೂಜೆ, ಗಣ ಹೋಮ, ಪೂರ್ಣಾಹುತಿ ಬಳಿಕ ಲಕ್ಷ್ಮಿ ಪೂಜೆ ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು.

ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅವರು ಪೂಜೆಯಲ್ಲಿ ಭಾಗವಹಿಸಿ ಬಳಿಕ ಮಾತನಾಡಿ ನವರಾತ್ರಿ ಸಂದರ್ಭ ಶಕ್ತಿ ದೇವತೆಗಳ ಆರಾಧನೆ ಮಾಡಿ ಒಂಬತ್ತು ದಿನಗಳ ಕಾಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ, ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ದೇವತೆಗಳ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಕನ್ನಡ ನಾಡು ಸಂಪತ್ಭರಿತವಾಗಿರಲಿ ಎಂದು ಶುಭ ಕೋರಿದರು.
ಸಂಸ್ಥೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ಜೈನ್ ಅವರು ಮಾತನಾಡಿ ಎಲ್ಲರೂ ಒಟ್ಟಾಗಿ ಒಂದೆಡೆ ಸೇರಿ ಹಬ್ಬ ಆಚರಿಸುವುದರಿಂದ ನಮ್ಮಲ್ಲಿ ಭಾವೈಕ್ಯತೆ ಮೂಡಿ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ತಿಳಿಸಿ ಹಬ್ಬದ ಶುಭ ಕೋರಿದರು.
ಈ ಸಂದರ್ಭ ಜನಜಾಗೃತಿ ವೇದಿಕೆಯ ಬಿ.ಜೆ ದೇವರಾಜು, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಮುಖಂಡರಾದ ಜ್ಞಾನೇಶ್ ಮತ್ತು ಮೇಲ್ವಿಚಾರಕ ಶ್ರೇಣಿ ಹಾಗೂ ಯೋಜನಾ ಕಚೇರಿ ಸಿಬ್ಬಂದಿ ಮತ್ತು ಸೇವಾ ಪ್ರತಿನಿಧಿಗಳು ಇದ್ದರು.