ನವದೆಹಲಿ: ಮಧ್ಯ ಪ್ರದೇಶ ಚುನಾವಣೆಗೆ ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ದೇಶದ ಅತ್ಯಂತ ಹಳೆಯ ಪಕ್ಷವು ಜಾತಿ ಗಣತಿಯನ್ನು ಬೆಂಬಲಿಸಿರುವುದು ಪವಾಡವೇ ಸರಿ. ಹಿಂದುಳಿದ ಜಾತಿಗಳ ಬೆಂಬಲವಿಲ್ಲದೆ ಯಶಸ್ವಿಯಾಗುವುದು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಜಾತಿ ಗಣತಿಯ ಬೇಡಿಕೆಯನ್ನು ಬೆಂಬಲಿಸಿದೆ ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್‌ನವರಿಗೆ ಈಗ ಹಿಂದುಳಿದ ಜಾತಿಗಳ ಬೆಂಬಲ ಇಲ್ಲದೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಅರಿವಾಗಿದೆ. ಆದರೆ. ಅವರು ಹುಡುಕುತ್ತಿರುವ ಮತಗಳು ಈಗ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ. ಈಗಿರುವ ಗೊಂದಲವು ಮುಂದುವರಿದರೆ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಯಾದವ್ ಹೇಳಿದ್ದಾರೆ. ದೇಶಕ್ಕೆ ೨೦೨೪ ರಲ್ಲಿ ದೊಡ್ಡ ಸವಾಲಿದೆ. ಬಿಜೆಪಿ ಒಂದು ದೊಡ್ಡ ಪಕ್ಷವಾಗಿದೆ. ಅದು ಅತ್ಯಂತ ಸಂಘಟಿತವಾಗಿ ಸಜ್ಜಾಗಿದೆ. ಆದ್ದರಿಂದ ಅದನ್ನು ಎದುರಿಸಲು ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಉಂಟಾಗಬಾರದು. ನೀವು ಗೊಂದಲದಿಂದ ಬಿಜೆಪಿಯನ್ನು ಎದುರಿಸಿದರೆ, ನೀವು ಯಶಸ್ವಿಯಾಗುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ.