ಶಿವಮೊಗ್ಗ: ಜಾನುವಾರುಗಳ ಮೇಲಿನ ಉಣ್ಣಿ(ಟಿಕ್) ಸಂಖ್ಯೆ ನಿಯಂತ್ರಣ ಮತ್ತು ಪರೀಕ್ಷೆಗಳಿಂದ ಶೀಘ್ರ ರೋಗ ಪತ್ತೆ ಮಾಡುವ ಮೂಲಕ ಕ್ಯಾಸನೂರು ಫಾರೆಸ್ಟ್ ಡಿಸೀಸ್‍ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಎಫ್‍ಡಿ ಮತ್ತು ರೇಬಿಸ್ ಕುರಿತಾದ ಅಂತರ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಲೆನಾಡಿನ ಅತಿ ಹೆಚ್ಚು ಉಣ್ಣಿಗಳಿರುವ ಪ್ರದೇಶಗಳನ್ನು ಗುರುತಿಸಿ, ಜಾನುವಾರುಗಳಿಗೆ ಅಂತಹ ಪ್ರದೇಶದಲ್ಲಿ ಮೇಯದಂತೆ ಕ್ರಮ ವಹಿಸಬೇಕು. ಕಾಲ ಕಾಲಕ್ಕೆ ಜಾನುವಾರುಗಳಿಗೆಐವರ್‍ಮೆಕ್ಟಿನ್/ಡೊರಾಮೆಕ್ಟಿನ್ ಲಸಿಕೆ ನೀಡಬೇಕು. ಜಾನುವಾರುಗಳ ಬೆನ್ನಿನ ಮೇಲೆ ಪೊರಾನ್ ಸಿಂಪಡಿಸಬೇಕು. ರೈತರು ಜಾನುವಾರುಗಳು ಮತ್ತು ಕೊಟ್ಟಿಗೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.
ಮಂಗ ಸತ್ತರೆ ಅರಣ್ಯ, ಪಶುಪಾಲನೆ, ಆರೋಗ್ಯ ಇಲಾಖೆಯರು ಮತ್ತು ಸಂಬಂಧಿಸಿದ ಪಿಡಿಓ ರವರು ಅದನ್ನು ವರದಿ ಮಾಡಬೇಕು. ಹಾಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, 60 ಮೀಟರ್ ಒಳಗೆ ರಾಸಾಯನಿಕ ಸಿಂಪಡಿಸಿ, ಇಲ್ಲಿ ಮಾನವರ, ಇತರೆ ಪ್ರಾಣಿಗಳ ಪ್ರವೇಶವನ್ನು ತಡೆಯಬೇಕು ಎಂದರು. ಗ್ರಾಮ ಸಭೆಗಳಲ್ಲಿ ಕೆಎಫ್‍ಡಿ ಕುರಿತು ಅರಿವು ಮೂಡಿಸಿ, ಗ್ರಾಮಗಳಲ್ಲಿ ಈ ಕುರಿತಾದ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳು ಹೆಚ್ಚಬೇಕು. ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ತಂಡ ಕ್ಷೇತ್ರ ಭೇಟಿ ನೀಡಬೇಕು. ಸ್ಥಳೀಯ ಸಭೆಗಳಲ್ಲಿ ಇದರ ಬಗ್ಗೆ ಮಾಹಿತಿ ನಿಡಬೇಕು. ಪಿಡಿಓ ಗಳು ಸಹ ಸಹಕರಿಸಬೇಕು.
ಈ ಕಾರ್ಯಕ್ರಮದಡಿ ಈ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಲ್ಟಿಸೆಕ್ಟರಲ್ ಟಾಸ್ಕ್‍ಫೋರ್ಸ್ ಸಮಿತಿ ರಚಿಸಬೇಕೆಂದರು. ಜಿಲ್ಲಾಧಿಕಾರಿಗಳು ಸಮಿತಿ ರಚನೆ ಮಾಡಿ, ಕಾರ್ಯಕ್ರಮದನ್ವಯ ಎಲ್ಲ ಆಸ್ಪತ್ರೆಗಳಲ್ಲಿ ಉಸಿರಾಟದ ಖಾಯಿಲೆಗಳನ್ನು ಆನ್‍ಲೈನ್ ಎಂಟ್ರಿ ಮಾಡಬೇಕು. ಇತರೆ ದುಷ್ಪರಿಣಾಮ ತಡೆಗಟ್ಟಲು ನಿಯಮಾನುಸಾರ ಕ್ರಮ ವಹಿಸಬೇಕೆಂದರು.ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಸುಜಾತ ಕೆಆರ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.