ಬಳ್ಳಾರಿ: ಕರ್ತವ್ಯದಲ್ಲಿದ್ದು, ಕರ್ತವ್ಯಕ್ಕಾಗಿ ದುಡಿದು, ಕರ್ತವ್ಯ ಮಾಡುತ್ತಲೇ ಪ್ರಾಣತ್ಯಾಗ ಮಾಡಿದ ಎಲ್ಲಾ ಸಮವಸ್ತ್ರಧಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ದೇಶ ಮತ್ತು ರಾಜ್ಯಕ್ಕಾಗಿ ಕರ್ತವ್ಯ ಪಾಲನೆಯಲ್ಲಿ ಪ್ರಾಣತ್ಯಾಗ ಮಾಡಿದಮಹನೀಯರನ್ನು ನಾವೆಲ್ಲರೂ ಸ್ಮರಿಸುತ್ತಾ, ಅವರ ಕುಟುಂಬವು ಧೈರ್ಯದಿಂದ ಸುಖಕರವಾಗಿರಬೇಕು ಎಂದು ಆಶಿಸಿದರು.
ಸಿಆರ್‍ಪಿಎಫ್ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮ ಸಮರ್ಪಣೆಯನ್ನು ಭಾರತ ದೇಶದ ಎಲ್ಲಾ ಪ್ರಜೆಗಳು ಇಂದಿಗೂ ಸ್ಮರಿಸುತ್ತಾರೆ. ಅವರ ಸವಿನೆನಪಿಗಾಗಿ ಒಂದು ಸ್ಮಾರಕವನ್ನೂ ಸಹ ನಿರ್ಮಿಸಲಾಗಿದೆ. ವೀರ ಮರಣವನ್ನು ಅಪ್ಪಿದ ಎಲ್ಲಾ ಸಮವಸ್ತ್ರಧಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ನೆನಪು ಹಾಗೂ ಶಾಂತಿಗಾಗಿ ದೇಶಾದ್ಯಂತ ಅ.೨೧ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು. ೨೦೨೨-೨೩ ನೇ ಸಾಲಿನಲ್ಲಿ ಇಡೀ ಭಾರತ ದೇಶದಲ್ಲಿ ಮರಣ ಹೊಂದಿದ ಒಟ್ಟು ೧೮೯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಲ್ಲಿ ಕರ್ನಾಟಕ ರಾಜ್ಯದ ೧೬ ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರೂ ಸಹ ಕರ್ತವ್ಯ ಪಾಲನೆಯಲ್ಲಿ ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಸಾರಿ ಕುಶಾಲುತೋಪು ಹಾರಿಸುವ ಮೂಲಕ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ಎಂ.ಎನ್.ಶಶಿಧರ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.
