ಹೆಚ್.ಡಿ.ಕೋಟೆ: ಭಾರತದಲ್ಲಿ ಮಣ್ಣಿಗೆ ಪೂಜ್ಯನೀಯ ಭಾವನೆ ಇದ್ದು, ನಮ್ಮದು ಐಕ್ಯತೆಯ ರಾಷ್ಟ್ರವಾಗಿದೆ ಎಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಪಿ.ಧರಣೇಶ್ ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು, ತಾಲ್ಲೂಕು ಪಂಚಾಯತಿ, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹೆಚ್.ಡಿ.ಕೋಟೆ ಇವರುಗಳ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ‘ನನ್ನ ಮಣ್ಣು ನನ್ನ ದೇಶ’ ಅಮೃತ ಕಳಶ ಯಾತ್ರೆ, ಮಣ್ಣಿಗೆ ನಮನ ವೀರರಿಗೆ ವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹುತಾತ್ಮ ವೀರಯೋಧರಿಗೆ ಗೌರವ ಸಲ್ಲಿಸಲು ದೆಹಲಿಯ ಇಂಡಿಯಾ ಗೇಟ್ ನ ಕರ್ತವ್ಯ ಪಥದಲ್ಲಿ ಅಮೃತವಾಟಿಕ ಉದ್ಯಾನವನ ಸ್ಮಾರಕ ಅಭಿವೃದ್ಧಿ ಪಡಿಸಲಾಗುತ್ತದೆ. ಇದು ದೇಶದ ಜನರ ಸಂಸ್ಕೃತಿ, ಪರಂಪರೆ ಹಾಗೂ ಸಾಧನೆಗಳ ಭವ್ಯ ಇತಿಹಾಸವನ್ನು ಸ್ಮರಿಸಲು ಯುವ ಪೀಳಿಗೆಗೆ ನೆರವಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳ ಪವಿತ್ರ ಸ್ಥಳದಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಳಸದಲ್ಲಿ ಶೇಖರಿಸಿ ನೆಹರು ಯುವ ಕೇಂದ್ರದವರ ಮೂಲಕ ದೆಹಲಿಗೆ ಕಳುಹಿಸಿ ಕೊಡಲಾಗುತ್ತಿದೆ. ಉದ್ಯಾನವನದಲ್ಲಿ ಸ್ಥಳೀಯ ಪ್ರಬೇಧ ದೇಶಿಯ ಸಸಿಗಳನ್ನು ನೆಡುವುದರೊಂದಿಗೆ ದೇಶದ ಸ್ವತಂತ್ರ್ಯ, ಏಕತೆ ಮತ್ತು ಸಮಗ್ರತೆಗಾಗಿ ಕೊಡುಗೆ ನೀಡಿದ ಎಲ್ಲಾ ನಾಯಕರಿಗೆ ಅರ್ಪಿತವಾದ “ಆಜಾದಿ ಕಾ ಅಮೃತ ಮಹೋತ್ಸವ” ಸ್ಮಾರಕ ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಅಮೃತ ಕಳಸವನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ನೆಹರು ಯುವ ಕೇಂದ್ರದ ಸ್ವಯಂ ಸೇವಕರಿಗೆ ಹಸ್ತಾಂತರಿಸಿದರು. ತಾಲ್ಲೂಕಿನ ನಿವೃತ್ತ ಯೋಧ ಸುರೇಶ್, ಯೋಧ ನವೀನ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನಾ, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಿಂದ ತಾಲ್ಲೂಕು ಪಂಚಾಯಿತಿ ವರೆಗೆ ನನ್ನ ಮಣ್ಣು ನನ್ನ ದೇಶ, ಮಣ್ಣನ್ನು ರಕ್ಷಿಸಿ ಎಂಬ ಘೋಷ ವಾಕ್ಯಗಳನ್ನು ಕೂಗುತ್ತಾ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿಗಳಾದ ರಂಗಸ್ವಾಮಿ ಅವರು, ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಾದ ರಘುನಾಥ್ ಕೆ.ಎಂ.ಅವರು, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್.ವೆಂಕಟೇಶ್ ಅವರು, ಎನ್.ಎಸ್.ಎಸ್. ಸಂಯೋಜಕರಾದ ಎಮ್.ಆರ್.ರಾಮಚಂದ್ರ, ನೆಹರು ಯುವ ಕೇಂದ್ರದ ಸ್ವಯಂ ಸೇವಕ ಲಕ್ಷ್ಮೀಕಾಂತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.