ಹನೂರು : ಕಾಡುಗಳ್ಳ ವೀರಪ್ಪನ್ ನ ರಕ್ಕಸದಾಳಿಗೆ ಬಲಿಯಾದ ಪೊಲೀಸರಿಗೆ ಘಟನೆ ನಡೆದ ಸ್ಥಳಗಳಲ್ಲೇ ಪುಷ್ಪನಮನ ಸಲ್ಲಿಸಿ ಹುತಾತ್ಮ ದಿನ ಆಚರಿಸಿದರು.
ಮದ್ರಾಸ್ ಪ್ರೆಸಿಡೆನ್ಸಿ ಆಳ್ವಿಕೆಯ ಕಾಲದಲ್ಲಿ 1904 ರಲ್ಲಿ ನಿರ್ಮಾಣವಾಗಿದ್ದ ರಾಮಾಪುರ ಪೊಲೀಸ್ ಠಾಣೆ ಮೇಲೆ 1992 ರಂದು ವೀರಪ್ಪನ್ ದಾಳಿಮಾಡಿ ಪೊಲೀಸ್ ಕಾನ್ಸಟೇಬಲ್ ಗಳಾದ ರಾಚಪ್ಪ, ಗೋವಿಂದರಾಜು, ಪ್ರೇಮಕುಮಾರ್, ಇಳಂಗೋವನ್, ಸಿದ್ದರಾಜು ಎಂಬವರನ್ನು ಹತ್ಯೆ ಮಾಡಿದ್ದ ನೆನಪಿನಲ್ಲಿ ಇಂದು ರಾಮಾಪುರ ಪೊಲೀಸರು ಗೌರವ ನಮನ ಸಲ್ಲಿಸಿದರು.
ಬಳಿಕ, ಹೊಂಚುಹಾಕಿ 1992ರ ಆಗಸ್ಟ್ 14 ರಂದು ಎಸ್ಪಿ ಟಿ.ಹರಿಕೃಷ್ಣ, ಪಿಎಸ್ಐ ಶಕೀಲ್ ಅಹಮದ್, ಎಎಸ್ಐ ಬೆನಗೊಂಡ, ಕಾನ್ಸ್‌ಟೇಬಲ್ ಗಳಾದ ಸಿ.ಎಂ.ಕಾಳಪ್ಪ, ಸುಂದರ್, ಅಪ್ಪಚ್ಚು ಎಂಬವರನ್ನು ಬಲಿಪಡೆದ ಮೀಣ್ಯಂ ದಾಳಿ ಸ್ಮಾರಕ ಸ್ಥಳಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.
ಇನ್ನು, ಮಲೆಮಹದೇಶ್ವರ ಬೆಟ್ಟ ಪೊಲೀಸರು ಹೊಗೆನಕಲ್ ದಾಳಿ ಎಂದೇ ಹೆಸರಾದ ವೀರಪ್ಪನ್ ದಾಳಿಗೆ ಬಲಿಯಾದ ಪೊಲೀಸರಿಗೆ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಗೌರವ ನಮನ ಸಲ್ಲಿಸಿದರು.
