ಮಹಾರಾಷ್ಟ್ರ: ಕಳೆದ ಎರಡು ದಿನಗಳ ಹಿಂದಷ್ಟೇ ಬಾರಾಮತಿಯಲ್ಲಿ ನಡೆದ ವಿಮಾನ ಪತನ ಘಟನೆ ಮಾಸುವ ಮುನ್ನವೇ ಇಂದು ಬೆಳಗ್ಗೆ ಮತ್ತೆ ತರಬೇತಿ ವಿಮಾನವೊಂದು ಪತನವಾಗಿದೆ. ಇಲ್ಲಿನ ಹಳೆ ಸಹ್ಯಾದ್ರಿ ಹಸುವಿನ ತೋಟದ ಬಳಿ ಪತನಗೊಂಡಿದ್ದು, ಪೈಲಟ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬಾರಾಮತಿಯಲ್ಲಿ ವಾಯುಯಾನ ತರಬೇತಿ ಸಂಸ್ಥೆ ಇದೆ. ಕಳೆದ ಕೆಲವು ದಿನಗಳಲ್ಲಿ ವಿಮಾನ ಅಪಘಾತ ಸಂಭವಿಸಿದ ಐದನೇ ಘಟನೆ ಇದಾಗಿದ್ದು, ದುರಂತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ದಿಢೀರ್ ವಿಮಾನ ಅಪಘಾತದಿಂದಾಗಿ ಸ್ಥಳೀಯ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಕಲಿಕಾ ತರಬೇತಿ ವಿಮಾನ ಅಪಘಾತಕ್ಕೀಡಾದ ಘಟನೆಗಳು ನಡೆಯುತ್ತಲೇ ಇವೆ. ಬಾರಾಮತಿ ಮತ್ತು ಇಂದಾಪುರದಲ್ಲಿ ವಿಮಾನ ಅಪಘಾತ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಸೂಕ್ತ ಯೋಜನೆ ರೂಪಿಸಬೇಕೆಂಬ ಆಗ್ರಹ ಕೇಳಿಬಂದಿದೆ. ವಿಮಾನ ಪತನದಿಂದ ಪ್ರಾಣಹಾನಿಯಾಗುವ ಭೀತಿ ಎದುರಾಗಿದೆ.
ಕಳೆದ ಫೆಬ್ರವರಿ ೨೦೧೯ ರಲ್ಲಿ ಸಹ ರೂಯಿ ಬಾಬಿರ್ ಗ್ರಾಮದಲ್ಲಿ ಅಪಘಾತ ಸಂಭವಿಸಿತ್ತು. ೨೦೨೨ರಲ್ಲಿ ಇಂದಾಪುರ ತಾಲೂಕಿನ ಕಡಬನವಾಡಿಯಲ್ಲಿ ಸಹ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಜೊತೆಗೆ, ಕಳೆದ ಎರಡು ದಿನಗಳ ಹಿಂದೆಯಷ್ಟೇ ರೆಡ್ ಬರ್ಡ್ ಕಂಪನಿಯ ವಿಮಾನ, ನಿಲ್ದಾಣದ ಬಳಿ ಅಪಘಾತಕ್ಕೀಡಾಗಿತ್ತು. ಖಾಸಗಿ ವಿಮಾನಯಾನ ಕಂಪನಿಯ ತರಬೇತು ವಿಮಾನ ಬಾರಾಮತಿಯಲ್ಲಿ ರನ್ ವೇಯಿಂದ ಟೇಕಾಫ್ ಆಗಿತ್ತು. ಆದರೆ, ಕೆಲವು ತಾಂತ್ರಿಕ ದೋಷದಿಂದಾಗಿ ಸಂಜೆ ಕಟ್ ಫಾಲ್ ಗ್ರಾಮದ ಬಳಿ ಕ್ರ್ಯಾಶ್-ಲ್ಯಾಂಡ್ ಆಗಿದೆ ಎಂದು ಬಾರಾಮತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಭಾಕರ ಮೋರೆ ಹೇಳಿದ್ದರು.