ಮಂಗಳೂರು ದಕ್ಷಿಣ ಕನ್ನಡ: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ. ಈಗ ಬಣ್ಣ ಬಣ್ಣದ ವೇಷಗಳನ್ನು ಹಾಕಿ ಸಂಭ್ರಮಪಡುವ ಸಮಯ. ಆದ್ರೆ ಇಲ್ಲೊಬ್ಬ ವೇಷಧಾರಿಯೋರ್ವ ಯಕ್ಷಗಾನದ ವೇಷ ಹಾಕಿದ್ದ ಎಂಬ ಕಾರಣಕ್ಕಾಗಿ ಹಿರಿಯ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವೇಷಧಾರಿ ವ್ಯಕ್ತಿಯನ್ನು ತಡೆದು ವೇಷವನ್ನು ಕಳಚಲು ಹೇಳಿದ ಘಟನೆಯೊಂದು ಬಿಸಿರೋಡಿನಲ್ಲಿ ನಡೆದಿದ್ದು, ಇದ್ರ ವೀಡಿಯೋ ವೈರಲ್ ಆಗಿದೆ.
ದಾವಣಗೆರೆ ಮೂಲದ ವ್ಯಕ್ತಿ ಎಂದು ಹೇಳಲಾಗಿರುವ ಈ ವ್ತಕ್ತಿ ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನದ ವೇಷ ಹಾಕಿ ಹೋಗುತ್ತಿದ್ದ. ಇದೇ ವೇಳೆ ಆಗಮಿಸಿದ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ಯಕ್ಷಗಾನದ ವೇಷ ಹಾಕುವಂತಿಲ್ಲ. ಅದನ್ನು ತೆಗೆಯುವಂತೆ ಒತ್ತಾಯ ಮಾಡುವ ಬಗ್ಗೆ ವಿಡಿಯೋದಲ್ಲಿ ಕಂಡು ಬಂದಿದೆ. ಯಕ್ಷಗಾನವನ್ನು ನಾವು ಇಲ್ಲಿ ಪೂಜೆ ಮಾಡುತ್ತೇವೆ. ನಿನಗೆ ಗೊತ್ತುಂಟಾ..? ನೀನು ವೇಷ ಹಾಕಿ ಬಿಕ್ಷೆ ಬೇಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ವೇಷಧಾರಿ ಹೇಳಿದಾಗ ಹೊಡೆಯುವುದು ಅಲ್ಲ, ವೇಷ ತೆಗೆಯದಿದ್ದಲ್ಲಿ ಕೈ ಕಾಲು ಮುರಿದು ಹಾಕುವಂತೆ ಬೆದರಿಸಿ ಬೈದಿರುವ ವಿಡಿಯೋ ಇದೀಗ ವೈರಲ್ ಆಗಿದೆ.