ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕೆಲ ಗಂಟೆಗಳು ಬಾಕಿ ಉಳಿದಿವೆ. ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ೪೯ ಟ್ಯಾಬ್ಲೋಗಳು ಭಾಗಿಯಾಗಲಿವೆ. ಜಂಬೂಸವಾರಿ ಮೆರವಣಿಗೆಗೆ ೪೭ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳು ಸಿದ್ಧವಾಗಿವೆ. ಮಧ್ಯಾಹ್ನ ೧.೪೬ ರಿಂದ ೨.೦೮ ರ ಶುಭ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಈ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ. ಆ ನಂತರ ಸ್ತಬ್ಧಚಿತ್ರಗಳು, ಕಲಾತಂಡಗಳು ನಿಶಾನೆ ಆನೆಗಳು ಮೆರವಣಿಗೆ ಹೊರಡಲಿವೆ.
ಸಂಜೆ ೪.೪೦ ರಿಂದ ೫ ವರೆಗೆ ಸಲ್ಲುವ ಶುಭ ಮೀನ ಮುಹೂರ್ತದಲ್ಲಿ ಅಭಿಮನ್ಯು ಆನೆ ಹೊತ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡುವರು. ಈ ಮೂಲಕ ಮೆರವಣಿಗೆ ಪ್ರಾರಂಭವಾಗಲಿದ್ದು, ಸುಮಾರು ೫ ಕಿ.ಮೀ ದೂರ ರಾಜಪಥದಲ್ಲಿ ಸಾಗಲಿದೆ. ನಂತರ ಈ ಮೆರವಣಿಗೆ ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ. ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ. ಸುಮಾರು ೬,೦೦೦ಕ್ಕೂ ಹೆಚ್ಚು ಪೊಲೀಸರನ್ನು ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿದೆ. ಒಬ್ಬರು ಡಿಐಜಿ, ೮ ಮಂದಿ ಎಸ್‌ಪಿಗಳು, ೧೦ ಮಂದಿ ಅಡಿಷನಲ್ ಎಸ್‌ಪಿಗಳು, ಸಿಸಿಟಿವಿ ಕ್ಯಾಮರಾಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಭಾರಿ ಬಂದೋಬಸ್ತ್ ಮಾಡಲಾಗಿದೆ.
ಬನ್ನಿಮಂಟಪದ ಮೈದಾನದಲ್ಲಿ ರಾತ್ರಿ ೭.೩೦ಕ್ಕೆ ಆಕರ್ಷಕ ಪಂಜಿನ ಕವಾಯತು ನಡೆಯಲಿದೆ. ಇದರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವರು ಭಾಗವಹಿಸಲಿದ್ದಾರೆ. ಅಂಬಾರಿ ಹೊರಡುವ ಮಾರ್ಗದಲ್ಲಿ ಭಾರಿ ಭದ್ರತೆಯ ಜತೆಗೆ ಅಂಬಾರಿ ಆನೆಯ ಸುತ್ತಲೂ ಭದ್ರತೆ ಹಾಕಲಾಗಿದೆ. ವಿಶೇಷ ಪೊಲೀಸ್ ಘಟಕ ನಿಯೋಜನೆ ಮಾಡಲಾಗಿದೆ. ಬಾಂಬ್ ಪತ್ತೆ ಹಾಗೂ ನಿಗ್ರಹದಳ, ಶ್ವಾನದಳ ಸೇರಿದಂತೆ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್ ಇರಲಿದೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾಹಿತಿ ನೀಡಿದರು.