ಮೈಸೂರು: ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಬೆಳ್ಳಿರಥದಲ್ಲಿ ಜನಪದ ಕಲಾತಂಡಗಳ ಜೊತೆಗೆ ಅರಮನೆಯತ್ತ ಹೊರಟಿದೆ. ಮೆರವಣಿಗೆ ವೇಳೆ ಚಾಮುಂಡಿಗೆ ಜೈಕಾರ ಕೂಗಿ ಭಕ್ತರ ಹರ್ಷೋದ್ಗಾರ ಮೊಳಗಿದೆ.
ವಿಶ್ವವಿಖ್ಯಾತ ಜಂಬೂಸವಾರಿಗೆ ಕೆಲಗಂಟೆಗಳು ಬಾಕಿ ಉಳಿದಿದೆ. ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ ೭೫೦ ಕೆ ಜಿ ತೂಕದ ಚಿನ್ನದ ಅಂಬಾರಿ. ಆನೆ ಮೇಲೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಟಾಪಿಸಲಾಗುತ್ತದೆ. ಈ ಚಿನ್ನದ ಚಿನ್ನದ ಅಂಬಾರಿ ವಿನ್ಯಾಸ ಮತ್ತು ಅದರ ಹಿನ್ನೆಲೆ ಬಗ್ಗೆ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ಜೊತೆ ನಡೆಸಿರುವ ಮಾತುಕತೆ ಇಲ್ಲಿದೆ.
ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ೯.೪೫ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಆಗಮಿಸಲಿವೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಬಳಿಕ ಅರಮನೆ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ನೆರವೇರುತ್ತದೆ. ಬೆಳಗ್ಗೆ ೧೧ರಿಂದ ೧೧.೪೦ರವರೆಗೆ ಅರಮನೆಯ ಆನೆ ಬಾಗಿಲಿನಿಂದ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯುತ್ತದೆ. ಭುವನೇಶ್ವರಿ ದೇಗುಲದಲ್ಲಿ ಯದುವೀರ್ ಒಡೆಯರ್ ಅವರು ಶಮಿ ಪೂಜೆ ನೆರವೇರಿಸಲಿದ್ದಾರೆ.
ಮಧ್ಯಾಹ್ನ ೧.೪೬ರಿಂದ ೨.೪೮ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಮಾಡಲಾಗುತ್ತದೆ. ಕೋಟೆ ಆಂಜನೇಯಸ್ವಾಮಿ ದೇಗುಲ ಬಳಿ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಪೂಜೆ ನೆರವೇರುತ್ತದೆ. ಸಂಜೆ ೪.೪೦ರಿಂದ ೫ರ ನಡುವೆ ಶುಭಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ. ಜಂಬೂ ಸವಾರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಯದುವೀರ್ ಒಡೆಯರ್ ಪಾಲ್ಗೊಳ್ಳಲಿದ್ದಾರೆ.