ಮೈಸೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ವಿಜಯದಶಮಿ ಮತ್ತು ದಸರಾ ಮಹೋತ್ಸವದ ಶುಭಾಶಯ ಕೋರಿದ್ದಾರೆ. ನಗರದಲ್ಲಿ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ನೀಡಿದರು. ಮಧ್ಯಾಹ್ನ ೧.೪೫ ಗಂಟೆಗೆ ಅರಮನೆ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ಆನೆ ಮತ್ತು ಕುದುರೆ ಮತ್ತು ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯುತ್ತದೆ.
ಜಂಬೂ ಸವಾರಿ ಶುರುವಾಗುವ ಮೊದಲು ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಜಂಬೂ ಸವಾರಿ ಸಾಯಂಕಾಲ ೮.೦೦ ಗಂಟೆಗೆ ಬನ್ನಿಮಂಟಪ ತಲುಪಿದ ಬಳಿಕ ಟಾರ್ಚ್ ಲೈಟ್ ಪರೇಡ್ ನಡೆಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಕೊರತೆ ಮಳೆಯ ಕಾರಣ ರೈತರಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ವ್ಯಥೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಈಗಲಾದರೂ ಮಳೆಯಾಗಿ ಉಳಿದುಕೊಂಡಿರುವ ಬೆಳೆಗಳಿಗೆ ನೆರವಾಗಲಿ ಅಂತ ದೇವರನ್ನು ಪ್ರಾರ್ಥಿಸುವುದಾಗಿ ಹೇಳಿದರು.