ಚಾಮರಾಜನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ,ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ತಿನ ಸಹಕಾರದೊಂದಿಗೆ ಇಡೀ ರಾಜ್ಯದ್ಯಂತ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಯಶಸ್ವಿಯಾಗಿ ನೆರವೇರಲಿ ಹಾಗೂ ಲೋಕ ಕಲ್ಯಾಣಕ್ಕಾಗಿ ಆರಂಭಿಸಿರುವ ಶತಕೋಟಿ ಶ್ರೀರಾಮನಾಮ ಜಪ ಮಹಾಯಜ್ಞ ಹಾಗೂ ತಾರಕ ಯಜ್ಞ ಜಪ ಸಂಕಲ್ಪ ಕಾರ್ಯಕ್ರಮವನ್ನು ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಶಂಕರಪುರ ಶ್ರೀರಾಮ ಮಂದಿರ ಹಾಗೂ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪ್ರಾರಂಭಿಸಲಾಯಿತು.
ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಶ್ರೀರಾಮ ಭಾರತೀಯ ಸಂಸ್ಕೃತಿಯಲ್ಲಿ ಧರ್ಮರಕ್ಷಣೆ ಹಾಗೂ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಮಹಾನ್ ಶಕ್ತಿ ಪುರುಷ. ಶ್ರೀ ರಾಮನಾಮಸ್ಮರಣೆಯಿಂದ ಮನುಷ್ಯ ಜನ್ಮವು ಸಾರ್ಥಕವಾಗುವುದು. ಜಾತಿ ಮತ ಪಂಥ ಭೇದವಿಲ್ಲದೆ ಸರ್ವರೂ ಶ್ರೀ ರಾಮನಾಮಸ್ಮರಣೆಯನ್ನು ಮಾಡಬೇಕೆಂದು, ಶ್ರೀ ರಾಮ ನಾಮಸ್ಮರಣೆ ಮನುಷ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಿ, ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತದೆ. ಪ್ರತಿಯೊಬ್ಬರು ರಾಮ ನಾಮ ಜಪವನ್ನು ಮಾಡುವ ಮೂಲಕ ನೆಮ್ಮದಿಯನ್ನು ಶಾಂತಿಯನ್ನು ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರು.

ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿಗಳಾದ ಎಸ್ ಬಾಲಸುಬ್ರಮಣ್ಯ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಹಾಗೂ ಲೋಕದ ಸಮಸ್ತರಿಗೂ ಕಲ್ಯಾಣವಾಗಲಿ ಎಂಬ ಆಶಯದೊಂದಿಗೆ ಶತಕೋಟಿ ಶ್ರೀ ರಾಮನಾಮ ಜಪ ಯಜ್ಞವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆರಂಭಿಸಿದೆ. ಜಿಲ್ಲೆಯ ಸಮಸ್ತ ಜನರು ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕು ಎಂದು ತಿಳಿಸಿದರು. ಸಾಮೂಹಿಕವಾಗಿ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರವನ್ನು ಪಠಿಸಲಾಯಿತು. ಅಕ್ಟೋಬರ್ 24 ವಿಜಯದಶಮಿಯಿಂದ ಜನವರಿ 23ರ ವರೆಗೆ ನಿರಂತರವಾಗಿ ಶ್ರೀ ರಾಮನಾಮ ಜಪ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಮಹಾಸಭೆಯ ಪ್ರತಾಪ್, ಸತೀಶ್, ಕೇಶವ ಮೂರ್ತಿ , ಚೈತನ್ಯ ಹೆಗಡೆ, ಸುದರ್ಶನ್ ,ರಂಗನಾಥ್, ನಾಗಸುಂದರ್, ನಾಗೇಂದ್ರ, ರಾಜಗೋಪಾಲ್, ಮಹಿಳಾ ಸಂಘದ ವತ್ಸಲ ರಾಜಗೋಪಾಲ್, ಕುಸುಮ ಋಗ್ವೇದಿ, ವಿಜಯಲಕ್ಷ್ಮಿ ಗಾಯತ್ರಿ, ವಾಣಿಶ್ರೀ, ನಾಗಶ್ರೀ, ಮಾಲಾ, ಪದ್ಮಿನಿ, ಸುಧಾ, ಶ್ರಾವ್ಯ, ಶರಣ್ಯ ಋಗ್ವೇದಿ ಉಪಸ್ಥಿತರಿದ್ದರು.