ಮೈಸೂರು: ನಗರದ ಟ್ವಿನ್ಸ್ ಸಿಎಸ್ ಸಿ ಡಿಜಿಟಲ್ ಸೇವಾಕೇಂದ್ರ ಹಾಗೂ ಸಿಎಸ್ ಸಿ ಗ್ರಾಮೀಣ ಈ ಸ್ಟೋರ್ ವತಿಯಿಂದ ಮಾವುತರು ಹಾಗೂ ಕಾವಾಡಿಗಳ ಪುಟಾಣಿ ಮಕ್ಕಳಿಗೆ ಯಶಸ್ವಿಯಾಗಿ ಅಕ್ಷರ ಅಭ್ಯಾಸ ಕಾರ್ಯಕ್ರಮ ನಡೆಸಲಾಯಿತು.
ಅರಮನೆಯ ಅಂಗಳದಲ್ಲಿ ನಡೆದ ಕಾರ್ಯಕ್ರಮವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಎಂ ತಿವಾರಿ ಸ್ವತಃ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಗರ ಭಾಗದವರಿಗೆ ಶಿಕ್ಷಣದ ಮಹತ್ವ ಗೊತ್ತಿದೆ. ಆದರೆ, ಕಾಡಿನ ಭಾಗದಲ್ಲಿ ವಾಸಿಸುವ ಮಾವುತ ಹಾಗೂ ಕಾವಾಡಿಗರಿಗೆ ಶೈಕ್ಷಣಿಕ ಅರಿವು ಕಡಿಮೆಯಿದೆ. ಈ ಬಾರಿ ಸಿಎಸ್ ಸಿ ಡಿಜಿಟಲ್ ಸೇವಾಕೇಂದ್ರ ಹಾಗೂ ದೇವಾಲಯಂ ಸಂಸ್ಥೆ ಶೈಕ್ಷಣಿಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ನಿಜಕ್ಕೂ ಖುಷಿ ತಂದಿದೆ. ಇಂತಹದೊಂದು ಕಾರ್ಯಕ್ರಮ ಮಕ್ಕಳ ಶಿಕ್ಷಣಕ್ಕೆ ಪ್ರೇರಣೆಯಾಗಿದೆ ಎಂದರು.
ಟ್ವಿನ್ಸ್ ಸಿಎಸ್ ಸಿ ಡಿಜಿಟಲ್ ಸೇವಾಕೇಂದ್ರದ ಯಶೋಧ ಅವರು ಮಾತನಾಡಿ, ಮಾವುತ ಹಾಗೂ ಕಾವಾಡಿಗರ ಮಕ್ಕಳಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಅರಿವು ಮೂಡಿಸುವ ಉದ್ದೇಶದಿಂದ ದೇವಾಲಯ ಎಂಬ ಟ್ರಸ್ಟ್ ವತಿಯಿಂದ ಸಿಎಸ್ ಇ ಸೆಂಟರ್ ಸಹಯೋಗದೊಂದಿಗೆ 5 ವರ್ಷ ಒಳ ಪಟ್ಟ ಮಕ್ಕಳಿಗೆ ‘ವಿದ್ಯಾರಾಂಭಂ’ ಅಕ್ಷರಾಭ್ಯಾಸದ ಪೂಜಾ ಕಿಟ್ ಅನ್ನು ವಿತರಿಸಿ ಅವರಿಂದ ಅಕ್ಷರಾಭ್ಯಾಸ ಮಾಡುವಂತೆ ಪ್ರೇರೆಪಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ನಮ್ಮ ಸಂಪ್ರದಾಯದಲ್ಲಿ ಮೊದಲ ಅಕ್ಷರ ಶೃಂಗೇರಿ ಶಾರದಾ ದೇವಾಲಯದಲ್ಲಿ ಕಲಿಸಬೇಕೆಂಬ ಪದ್ಧತಿಯಿದೆ. ಆದರೆ, ಅನೇಕರಿಗೆ ಅಲ್ಲಿ ಅಕ್ಷರಾಭ್ಯಾಸ ಮಾಡಿಸಲು ಆಗುವುದಿಲ್ಲ. ಅಂತೆಯೇ ಮಾವುತ, ಕಾವಾಡಿಗರಿಗೂ ಇದು ಸಾಧ್ಯವಾಗಲ್ಲ. ಹೀಗಾಗಿ ಅಲ್ಲಿಂದಲೇ ವಿಶೇಷ ಅಕ್ಷರಾಭ್ಯಾಸದ ಕಿಟ್ ಗಳನ್ನು ತಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ವಿದ್ಯಾಭ್ಯಾಸಕ್ಕೆ ಚಾಲನೆ ಕೊಡಿಸಿದ್ದೇವೆ. ಅವರು ವಿದ್ಯಾವಂತರಾಗಬೇಕೆಂಬುದನ್ನು ಈ ಮೂಲಕ ಪ್ರೇರೆಪಿಸಲಾಗಿದೆ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಇಂದು ಮಾವುತ ಹಾಗೂ ಕಾವಾಡಿಗಳ ಮಕ್ಕಳಿಗೆ ಯಶಸ್ವಿಯಾಗಿ ಅಕ್ಷರಾಭ್ಯಾಸದ ಕಿಟ್ ನೀಡಿ ಸ್ವತಃ ಅಭ್ಯಾಸ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆಂದರು. ಈ ವೇಳೆ ಸಿಎಫ್ ಮಾಲತಿ ಪ್ರಿಯಾ, ಗ್ರಾಮೀಣ ಇಸ್ಟೋರ್ ಮ್ಯಾನೇಜರ್ ಕಿರಣ್ ಜೋಷಿ, ದೇವಾಲಯಂನ ಮಧು ಇನ್ನಿತರರು ಉಪಸ್ಥಿತರಿದ್ದರು.