ಚಿಕ್ಕಬಳ್ಳಾಫುರ: ಬಲ್ಕರ್ ಲಾರಿ ಹಾಗೂ ಟಾಟಾ ಸುಮೊ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಇಂದು (ಅ.26) ನಸುಕಿನ ವೇಳೆ ಚಿಕ್ಕಬಳ್ಳಾಪುರ ಹೊರವೊಲಯದಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಮುಂದೆಯೇ ಈ ದುರ್ಘಟನೆ ಸಂಭವಿಸಿದೆ.
ರಸ್ತೆ ಬದಿ ನಿಂತಿದ್ದ ಬಲ್ಕರ್ ಲಾರಿಗೆ ಟಾಟಾ ಸುಮೊ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಸುಮೊದಲ್ಲಿದ್ದ 12 ಜನ ಮೃತಪಟ್ಟಿದ್ದಾರೆ.
ಟಾಟಾ ಸುಮೊ ಬಾಗೇಪಲ್ಲಿಯಿಂದ ಬೆಂಗಳೂರು ಕಡೆ ಹೋಗುತ್ತಿತ್ತು. ಆದರೆ, ದಟ್ಟ ಮಂಜು ಹಿನ್ನೆಲೆಯಲ್ಲಿ ಟಾಟಾ ಸುಮೊ ಚಾಲಕನಿಗೆ ಸರಿಯಾಗಿ ರಸ್ತೆ ಕಾಣಿಸಿಲ್ಲ. ಇದರಿಂದ ರಸ್ತೆಬದಿ ನಿಂತಿದ್ದ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗುದ್ದಿ ರಭಸಕ್ಕೆ ಟಾಟಾ ಸುಮೊ ಮುಂದಿನ ಭಾಗ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇನ್ನು ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಗು, ಮೂವರು ಮಹಿಳೆಯರು ಸೇರಿ 12 ಜನರು ಮೃತಪಟ್ಟಿದ್ದಾರೆ. ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. ಮೃತರು ಆಂಧ್ರದ ಗೊರಂಟ್ಲ ನಿವಾಸಿಗಳು ಎನ್ನುವುದು ಗೊತ್ತಾಗಿದೆ. ಒಬ್ಬೊಬ್ಬರು ಒಂದೊಂದು ಊರಿನವರು ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.