ಬೆಂಗಳೂರು: ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಕಿದ ಸವಾಲನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ವೀಕರಿಸಿದ್ದು, ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಅವರು, ಡಿ. ಕೆ. ಶಿವಕುಮಾರ್ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಬಹಿರಂಗ ಚರ್ಚೆಗೆ ನನ್ನ ಒಪ್ಪಿಗೆ ಇದೆ. ನಾನು ಪಲಾಯನ ಮಾಡುವುದಿಲ್ಲ. ನನ್ನ ಬಳಿ ಸಾಕಷ್ಟು ಸರಕು ಇದೆ. ಚರ್ಚೆ ಮಾಡೋಣ ಬನ್ನಿ. ಡಿಕೆಶಿ ಹೇಳಿಕೆಯನ್ನು ನಾನು ಸ್ವಾಗತಿಸಿದ್ದೇನೆ ಎಂದರು.
ಅಧಿಕಾರ ತಿರುಗುತ್ತಾ ಇರುತ್ತದೆ. ಬ್ರಾಂಡ್ ಬೆಂಗಳೂರು ಕಸದ ರಾಶಿ. ಬಿಡದಿಯಲ್ಲಿ ಎಷ್ಟು ಕೈಗಾರಿಕೆಗಳಿವೆ ಹೇಳಿ? ಬೆಂಗಳೂರು ಡೈರಿಗಾಗಿ ಭೂಮಿ ವಶಪಡಿಸಿಕೊಂಡರೆ ಅಲ್ಲಿ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ? ನೀವು ಮತ್ತು ನಿಮ್ಮ ಪಟಾಲಮ್ ಎಷ್ಟು ಲೂಟಿ ಮಾಡಿದ್ರಿ. ನಿಮ್ಮ ಪ್ರಜ್ಞಾವಂತಿಕೆ ನಮಗೆ ಬೇಡಪ್ಪ. ಅಧಿಕಾರ ಶಾಶ್ವತ ಅಲ್ಲ ಮಿಸ್ಟರ್ ಡಿ.ಕೆ. ಶಿವಕುಮಾರ್ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಹೊಸಕೆರೆ ಹಳ್ಳಿಯ ಬಳಿಯ ಕೆಐಎಡಿಬಿ ಸ್ವಾಧೀನ ಆಗಿದ್ದ ಎಂಟು ಎಕರೆ ಜಮೀನನ್ನು ಕಾನೂನು ವಿರೋಧವಾಗಿ ನೋಂದಣಿ ಮಾಡಿಕೊಂಡಿದ್ದೀರಿ ಎಂದು ಡಿಕೆಶಿ ಬ್ರದರ್ಸ್ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ನಾನು ರಾಜಕೀಯ ವಿಲನ್. ಅದು ನಿಜವೇ. ನಾನು ಅವರಿಗೆ ಸ್ನೇಹಿತ ಎಂದು ಹೇಳೋದಿಕ್ಕೆ ಆಗೋದಿಲ್ಲ ಎನ್ನುವ ಮೂಲಕ ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ ಎಂಬ ಸಿದ್ದರಾಮಯ್ಯ ಹೇಳಿಕೆಗೂ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ.
ನಾನು ಸಿಎಂ ಆಗಿದ್ದಾಗ ನೋವು ಅನುಭವಿಸಿಕೊಂಡು ಬಂದೆ. ಬಿಜೆಪಿ ಮೇಲೆ ಆರೋಪ ಮಾಡಿದ್ದೆ. ಅದಕ್ಕೆ ಬಿತ್ತನೆ ಹಾಕಿದ್ದು ಯಾರು? ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದವರು ಮನೆ ಬಾಗಿಲಿಗೆ ಬಂದಿದ್ದು ಯಾರು? ಆರ್ಥಿಕ ವಿಚಾರ ಸಂಬಂಧ ಸಿಎಂ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.