ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ಟಗರು ಪಲ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾಳೆ ಅ. ೨೭ ಈ ಚಿತ್ರ ಬಿಡುಗಡೆ ಆಗುತ್ತಿದೆ. ಅದರ ಸಲುವಾಗಿ ನಿರ್ಮಾಪಕ ಧನಂಜಯ್ ಮತ್ತು ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಷಯ ಹಂಚಿಕೊಂಡರು. ಈ ಸಿನಮಾದಲ್ಲಿ ನಾಗಭೂಷಣ್, ಅಮೃತಾ ಪ್ರೇಮ್, ತಾರಾ ಅನುರಾಧ, ರಂಗಾಯಣ ರಘು, ವಾಸುಕಿ ವೈಭವ್, ಪೂರ್ಣಚಂದ್ರ ಮೈಸೂರು, ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ಮುಂತಾದವರು ನಟಿಸಿದ್ದಾರೆ. ಉಮೇಶ್ ಕೃಪ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟಗರು ಪಲ್ಯ ಸಿನಿಮಾದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ೧೭೫ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ಸಿಎಂ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ.
ಬಡವ ರಾಸ್ಕಲ್ ಮತ್ತು ಹೆಡ್ ಬುಷ್ ಸಿನಿಮಾವನ್ನು ನಿರ್ಮಾಣ ಮಾಡಿದ್ದೆವು. ಕಳೆದ ವರ್ಷ ನನ್ನ ಹುಟ್ಟುಹಬ್ಬದ ದಿನ ಕಾರ್ತಿಕ್ ಜೊತೆ ಮಾತಾಡುವಾಗ ಪ್ರೊಡಕ್ಷನ್ ಮುಂದುವರಿಸಬೇಕು ಎನಿಸಿತು. ಒಂದು ಒಳ್ಳೆಯ ಕಥೆಗೆ ಏನೇನು ಬೇಕೋ ಅದೆಲ್ಲವನ್ನೂ ಟಗರು ಪಲ್ಯ ಚಿತ್ರಕ್ಕೆ ಒದಗಿಸಿದ್ದೇವೆ. ಈ ಸಿನಿಮಾ ನಮಗೆ ಹೆಚ್ಚು ಕನೆಕ್ಟ್ ಆಗುವ ಪ್ರಾಜೆಕ್ಟ್. ಪರಭಾಷೆಯ ಸಿನಿಮಾಗಳನ್ನು ನೋಡಿದಾಗ ನಮ್ಮಲ್ಲೂ ಅಂಥ ಸಿನಿಮಾ ಬರಬೇಕು ಎನ್ನುತ್ತೇವಲ್ಲ. ಆ ರೀತಿಯ ಕಥೆ ಸಿನಿಮಾದಲ್ಲಿದೆ. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಬಂದವರು ನಾವು. ನಮ್ಮ ನಿರ್ಮಾಣ ಸಂಸ್ಥೆಯಿಂದ ಮೂವರು ನಿರ್ದೇಶಕರು ಬಂದಿದ್ದಾರೆ ಎಂಬುದು ನಮಗೆ ಹೆಮ್ಮೆ ತಂದಿದೆ ಎಂದು ಧನಂಜಯ್ ಹೇಳಿದ್ದಾರೆ.
ವಾಸುಕಿ ವೈಭವ್ ಅವರು ಟಗರು ಪಲ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿತರಕ ಕಾರ್ತಿಕ್ ಗೌಡ ಅವರು ಸಿನಿಮಾ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗುವ ಚಿತ್ರ. ಕನ್ನಡ ಭಾಷೆ, ಸಂಪ್ರದಾಯ ಮುಂತಾದ ಅಂಶಗಳು ಈ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಎಲ್ಲ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ. ಮನರಂಜನೆಯ ಅಂಶಗಳ ಜೊತೆ ಒಂದು ಊರಿನ ಸಂಪ್ರದಾಯವನ್ನು ಚೆನ್ನಾಗಿ ತೋರಿಸಲಾಗಿದೆ. ಈ ವರ್ಷ ನಾವು ವಿತರಣೆ ಮಾಡುತ್ತಿರುವ ಉತ್ತಮ ಸಿನಿಮಾ ಇದು ಎಂದು ಅವರು ಹೇಳಿದ್ದಾರೆ.