ಮಡಿಕೇರಿ : ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನನ್ನ ಮಣ್ಣು, ನನ್ನ ದೇಶ (ಮೇರಿ ಮಾಟಿ, ಮೇರಾ ದೇಶ್) ಅಭಿಯಾನದ ಪ್ರಯುಕ್ತ ಕೊಡಗು ಜಿಲ್ಲೆಯ ೫ ತಾಲ್ಲೂಕುಗಳಿಂದ ಸಂಗ್ರಹಿಸಲಾದ ಮಾದರಿ ಮಣ್ಣಿನ ಬಿಂದಿಗೆಗಳನ್ನು ನವದೆಹಲಿಗೆ ತಲುಪಿಸುವ ಸಂಬಂಧ ಗುರುವಾರ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರ ಸಮ್ಮುಖದಲ್ಲಿ ರಾಯಭಾರಿಗಳಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತ, ನೆಹರು ಯುವ ಕೇಂದ್ರ,ಜಿಲ್ಲಾ ಪಂಚಾಯತ್, ಜಿಲ್ಲಾ ಅಂಚೆ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಪಂಚಾಯಿತಿ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ, ತಾಲ್ಲೂಕು ಯುವ ಒಕ್ಕೂಟ ಇವರ ವತಿಯಿಂದ ಆಯೋಜಿಸಲಾಗಿದ್ದ ಮೇರ ದೇಶ್ ಮೇರ ಮಾಟಿ ಅಮೃತ್ ಕಳಸ ಯಾತ್ರೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು ಚಾಲನೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟರಾಜ ಅವರು ಮಾತನಾಡಿ ಅಮೃತ ಕಳಸ ಯಾತ್ರೆಗೆ ಅಭಿನಂದನೆ ತಿಳಿಸಿದರು. ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಭದ್ರತೆ ನೀಡಬೇಕು. ಹಾಗೆಯೇ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು. ರಾಯಭಾರಿಗಳಾಗಿ ದೆಹಲಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸುರಕ್ಷತೆ ಕಾಪಾಡಿಕೊಳ್ಳಲು ಸಲಹೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಅಂಚೆ ಇಲಾಖೆಯ ಹಿರಿಯ ಅಧಿಕಾರಿ ರವಿ, ಜಿಲ್ಲಾ ಯುವ ಒಕ್ಕೂಟ ಸಲಹೆಗಾರರು ಕಂದಾ ದೇವಯ್ಯ ಹಾಗೂ ಎಂ.ಬಿ.ಜೋಯಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ದಿಲೀಪ್ ಕುಮಾರ್, ನೆಹರು ಯುವ ಕೇಂದ್ರದ ಸಿಬ್ಬಂದಿಗಳಾದ ದೀಪ್ತಿ ರಂಜಿತ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಇದ್ದರು.