ಮಡಿಕೇರಿ : ರಾಜ್ಯದಲ್ಲಿ ಮೀನು ಕೃಷಿ ಉತ್ತೇಜನಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್.ವೈದ್ಯ ಅವರು ತಿಳಿಸಿದ್ದಾರೆ. ಹಾರಂಗಿಯ ಮಹಶೀರ್ ಮೀನುಮರಿಗಳ ಉತ್ಪಾದನಾ ಹಾಗೂ ಪಾಲನಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.ರಾಜ್ಯದಲ್ಲಿ ಮೀನು ಕೃಷಿಗೆ ಹೆಚ್ಚಿನ ಬೇಡಿಕೆ ಇದ್ದು, ಮೀನು ಕೃಷಿ ಅಭಿವೃದ್ಧಿಪಡಿಸಿ ದೇಶ-ವಿದೇಶಕ್ಕೆ ಮೀನನ್ನು ಪೂರೈಕೆ ಮಾಡಲು ಮುಂದಾಗಲಾಗಿದೆ ಎಂದು ಸಚಿವರು ಹೇಳಿದರು.
ಮೀನುಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೀನುಕೃಷಿಕರಿಗೆ ೫ ಲಕ್ಷ ರೂ.ವರೆಗೆ ಸಾಲ ಸೌಲಭ್ಯ, ಹಾಗೆಯೇ ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಮೀನು ಕೃಷಿಕರು, ಮೀನು ಮಾರಾಟಗಾರರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮೀನು ಕೃಷಿ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಮೀನುಮರಿ ಉತ್ಪಾದನೆ ಹೆಚ್ಚಿಸುವುದು, ಅಳಿವಿನಂಚಿನಲ್ಲಿರುವ ಮಹಶೀರ್ ಮೀನಿನ ಸಂರಕ್ಷಣೆಗಾಗಿ ಪಂಚವಾರ್ಷಿಕ ಯೋಜನೆಯಡಿ ಮಹಶೀರ್ ಮೀನು ಮರಿ ಉತ್ಪಾದನೆ, ಪಾಲನೆ ಮತ್ತು ನದಿ ಬಿತ್ತನೆ ಮೂಲಕ ಸಂರಕ್ಷಿಸಲು ಮುಂದಾಗಲಾಗಿದೆ ಎಂದು ಸಚಿವರು ವಿವರಿಸಿದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಆರ್.ಗಣೇಶ್, ಉಪ ನಿರ್ದೇಶಕರಾದ ಸಿ.ಎಸ್.ಸಚಿನ್, ಸಹಾಯಕ ನಿರ್ದೇಶಕರಾದ ಮಿಲನ ಭರತ್, ಸ್ನೇಹ, ಮೇಲ್ವಿಚಾರಕರಾದ ಬಿ.ಮಂಜು ಇತರರು ಇದ್ದರು.