Tuesday, April 22, 2025
Google search engine

Homeರಾಜ್ಯಆನೆ ದಾಳಿಗೆ ಯುವಕ ಬಲಿ: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಆನೆ ದಾಳಿಗೆ ಯುವಕ ಬಲಿ: ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಎಚ್.ಡಿ. ಕೋಟೆ : ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ವೀರನಹೊಸಹಳ್ಳಿ ವಲಯದ ಮಾಸ್ತಿ ಗುಡಿ ಪುನರ್ವಸತಿ ಕೇಂದ್ರದಲ್ಲಿ ಗಿರಿಜನ ಯುವಕನೋರ್ವ ಆನೆ ತುಳಿತದಿಂದ ಮೃತಪಟ್ಟಿದ್ದಾನೆ.

ಕೇಂದ್ರದ ರಾಮ ಎಂಬುವವರು ಪುತ್ರ ವಸಂತ(34) ಆನೆ ತುಳಿತಕ್ಕೆ ಅಸುನೀಗಿದ ಯುವಕ.

ಪುನರ್ವಸತಿ ಕಲ್ಪಿಸಿದ ವೇಳೆ ತಮಗೆ ನೀಡಿದ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಿ, ಕಟಾವು ಮಾಡಿದ್ದರು. ಕಟಾವಾಗಿದ್ದ ಜೋಳವನ್ನು ಎಂದಿನಂತೆ ರಾತ್ರಿಯ ವೇಳೆ ಕಾವಲು ಕಾಯಲು ತೆರಳಿದ್ದ ವೇಳೆ ಮಧ್ಯರಾತ್ರಿ ಒಂದು ಘಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.

ಪ್ರತಿಭಟನೆ : ಆನೆ ತುಳಿತದಿಂದಾಗಿ ಆದಿವಾಸಿ ವ್ಯಕ್ತಿಯೋರ್ವ ಮೃತ ಪಟ್ಟ ಹಿನ್ನೆಲೆ ಹಾಡಿ ಮಹಿಳೆಯರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಅಲ್ಲದೇ ಕಾಡಂಚಿನ ಪ್ರದೇಶದಲ್ಲಿ ರೈಲ್ವೇ ಬ್ಯಾರೀಕೆಡ್ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ನಿರತ ಮಹಿಳೆ ಮಾತನಾಡಿ ನಮ್ಮನ್ನು ಪುನರ್ವಸತಿ ನೆಪಹೇಳಿ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ತಂದಿಟ್ಟಿದ್ದಾರೆ, ನಮಗೆ ಸೂಕ್ತ ರಕ್ಷಣೆ ಇಲ್ಲ, ರಸ್ತೆ ಇಲ್ಲ, ನಾವು ಬೆಳೆದ ಬೆಳೆ ಕಾಡುಪ್ರಾಣಿಗಳ ಪಾಲಾಗುತ್ತಿದೆ. ಕುಡಿಯಲು ಶುದ್ಧ ನೀರಿಲ್ಲ, ಮಾನವನ ಪ್ರಾಣಕ್ಕೆ ಇಲ್ಲಿ ಬೆಲೆಯೇ ಇಲ್ಲ. ಕೊಡಗು, ಬಳ್ಳೆ ಸೇರಿದಂತೆ ಅನೇಕ ಕಡೆಯಿಂದ ಒಕ್ಕಲೆಬ್ಬಿಸಿ ನಮ್ಮನ್ನು ಸೌಕರ್ಯವಿಲ್ಲದ ಜೈಲಿನಂತಿರುವ ಈ ಪ್ರದೇಶಕ್ಕೆ ಕರೆತಂದಿದ್ದಾರೆ. ನಮಗೆ ಸೂಕ್ತ ಪರಿಹಾರ ನೀಡಬೇಕು, ಅಲ್ಲದೇ ಕಾಡು ಪ್ರಾಣಿಗಳ ಉಪಟಳದಿಂದಾಗಿ ಬೆಳೆ ಹಾನಿಯಾದರೆ ಕೇವಲ ಎರಡು ಮೂರು ಸಾವಿರ ಮಾತ್ರ ಪರಿಹಾರ ನೀಡುತ್ತಾರೆ. ಈ ಪರಿಹಾರ ಪಡೆದುಕೊಳ್ಳಲು ನಮ್ಮ ಹಣವೇ ಹೆಚ್ಚು ಖರ್ಚಾಗುತ್ತದೆ ಎಂದು ಆರೋಪಿಸಿದರು.

ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ತಾಲ್ಲೂಕು ದಂಡಾಧಿಕಾರಿ ಸಣ್ಣರಾಮಪ್ಪ, ಪಿಎಸ್‌ ಐ ಶಬ್ಬೀರ್ ಹುಸೇನ್ ಮಧ್ಯ ಪ್ರವೇಶಿಸ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರಾದರೂ ಪ್ರತಿಭಟನಾಕಾರರು ಪಟ್ಟು ಬಿಡದೇ, ನಾಗರಹೊಳೆ ಸಹಾಯದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದರು.

ನಂತರ ಸ್ಥಳಕ್ಕೆ ಹರ್ಷಕುಮಾರ್ ಚಿಕ್ಕನರಗುಂದ ಭೇಟಿ ನೀಡಿ ಮಾತನಾಡಿ, ಆಗಿರುವ ಘಟನೆಗೆ ಸೂಕ್ತ ಪರಿಹಾರ ನೀಡಲಾಗುವುದು. ಸರ್ಕಾರದಿಂದ 15 ಲಕ್ಷ ರೂ ಪರಿಹಾರವನ್ನು ನೀಡಲಾಗುವುದು. ಜೊತೆಗೆ ಪತ್ನಿಗೆ ನಾಲ್ಕು ವರ್ಷದವರಗೆ ಪ್ರತಿ ತಿಂಗಳು 4 ಸಾವಿರ ರೂ ಮಾಸಾಸನ ನೀಡಲಾಗುವುದು. 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರೊಬ್ಬರಿಗೆ ಇಲಾಖೆಯಲ್ಲಿ ಕೆಲಸ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಆ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈ ಬಿಟ್ಟರು.

ನಂತರ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.

ಈ ವೇಳೆ ಆರ್‌ ಎಫ್‌ ಓಗಳಾದ ಅಭಿ಼ಷೇಕ್, ಹರ್ಷಿತ್ ಸರ್ಕಲ್ ಇನ್ಸ್ಪೆಕ್ಟರ್ ಶಬೀರ್ ಹುಸೇನ್ ಪಿಎಸ್ ಐ ಪ್ರಕಾಶ್ ಇದ್ದರು.

RELATED ARTICLES
- Advertisment -
Google search engine

Most Popular