ಯಳಂದೂರು: ಪಟ್ಟಣ ಪಂಚಾಯಿತಿ ವತಿಯಿಂದ ನಗರೋತ್ಥಾನ ಯೋಜನೆಯಡಿಯಲ್ಲಿ ನಡೆದಿರುವ ಚರಂಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶಿಲ್ಪನಾಗ್ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಮೊದಲು ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಇಲ್ಲಿನ ಸಭಾಂಗಣದಲ್ಲಿ ಕೆಲ ಪಪಂ ಸದಸ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಪಪಂ ಸದಸ್ಯ ವೈ.ಜಿ. ರಂಗನಾಥ, ಮಹೇಶ್, ರವಿ ಪಟ್ಟಣದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಗೆ ಅಸಮಧಾನ: ನಂತರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಇಲ್ಲಿ ಶುದ್ಧ ಕುಡಿಯುವ ನೀರು ಇಲ್ಲದಿರುವ ಬಗ್ಗೆ , ವಿದ್ಯುತ್ ಕಡಿತಗೊಂಡಿರುವ ಬಗ್ಗೆ, ಅಲ್ಲದೆ ಮೆನು ಪ್ರಕಾರ ಆಹಾರ ತಯಾರಿಸದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ ಇಲ್ಲೇ ತಯಾರಿಸಿದ ಅನ್ನಸಾಂಬಾರ್ ಸೇವಿಸಿ ಸಾಂಬಾರಿನಲ್ಲಿ ಬೇಳೆಯೇ ಇಲ್ಲ, ರುಚಿಕಟ್ಟಾಗಿ ಆಹಾರ ನೀಡಬೇಕು. ಇಲ್ಲವಾದಲ್ಲಿ ಇದನ್ನು ನಾಳೆಯಿಂದಲೇ ಬಂದ್ ಮಾಡಿಸಲಾಗುವುದು ಎಂದು ಸಂಬಂಧಪಟ್ಟ ಟೆಂಡರ್ ಪಡೆದಿರುವ ವ್ಯಕ್ತಿಗೆ ಎಚ್ಚರಿಕೆ ನಿಡಿದರು. ಅಲ್ಲದೆ ನಾಳೆಯಿಂದಲೇ ಇದಕ್ಕೆ ವಿದ್ಯುತ್ ಮರುಸಂಪರ್ಕ ನೀಡಬೇಕು, ಮೆನು ಪ್ರಕಾರ ಆಹಾರ ತಯಾರಿಸಬೇಕು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಲ್ಲವಾದಲ್ಲಿ ಶಿಸ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಬಸ್ ನಿಲ್ದಾಣದ ಕಟ್ಟಡ ತೆರವಿಗೆ ಕ್ರಮ: ಬಸ್ ನಿಲ್ದಾಣದಲ್ಲಿ ರಸ್ತೆ ಅಗಲೀಕರಣದ ವೇಳೆ ಒಂದೇ ಒಂದು ಕಟ್ಟಡವನ್ನು ಮಾತ್ರ ಹಾಗೇ ಬಿಡಲಾಗಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಅನೇಕ ಅಪಘಾತಗಳೂ ಸಂಭವಿಸಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರು. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಕೂಡಲೇ ಇಲ್ಲಿಗೆ ರಾತ್ರಿ ವೇಳೆಯಲ್ಲಿ ಡಿವೈಡರ್‌ಗೆ ಸೂಚನಾ ಫಲಕ, ರಿಫ್ಲೇಕ್ಷನ್ ಲೈಟ್ ಅಳವಡಿಸಿ ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಅಲ್ಲದೆ ಈ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.
ಅಲ್ಲದೆ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಪತ್ರಕರ್ತರು ಹಾಗೂ ಶಿಕ್ಷಕರ ಭವನ ನಿರ್ಮಾಣಕ್ಕೆ ನಿಗಧಿಯಾಗಿರುವ ಸ್ಥಳವನ್ನು ಪರಿಶೀಲಿಸಿದರು. ಕೂಡಲೇ ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ತಯಾರು ಮಾಡಿಕೊಂಡು ಆದಷ್ಟು ಬೇಗ ಇವರಿಗೆ ನಿವೇಶನ ನೀಡಲು ಕ್ರಮ ವಹಿಸಿ ಎಂದು ಸಲಹೆ ನೀಡಿದರು.
ನಂತರ ಪಟ್ಟಣ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಇಲ್ಲಿನ ಕಂಪ್ಯೂಟರ್ ರೂಂ, ಲೈಬ್ರರಿಯನ್ನು ಪರಿಶೀಲಿಸಿದರು. ಕಟ್ಟಡಕ್ಕೆ ದಾನಿಗಳು ನೀಡಿರುವ ನಿವೇಶನದ ಬಗ್ಗೆ ಮಾಹಿತಿ ಪಡೆದುಕೊಂಡು ಎಲ್ಲಾ ದಾಖಲೆಗಳನ್ನು ಕಚೇರಿಗೆ ತರುವಂತೆ ಪ್ರಾಂಶುಪಾಲ ವಿಜಯರವರಿಗೆ ಮಾಹಿತಿ ನೀಡಿದರು.
ಪಿಡಿ ಸುಧಾ, ಎಇಇ ನಟರಾಜು, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜೆಇ ನಾಗೇಂದ್ರ, ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಬಿ. ರವಿ, ಮುಖಂಡರಾದ ಲಿಂಗರಾಜು, ಮಲ್ಲು,ರಾಜಶೇಖರ್ ಸೇರಿದಂತೆ ಅನೇಕರು ಇದ್ದರು. ೨೭ವೈಎಲ್‌ಡಿ ಚಿತ್ರ೦೧ ಯಳಂದೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್ ಶುಕ್ರವಾರ ಭೇಟಿ ನೀಡಿ ಜನಪ್ರತಿನಿಧಿಗಳು, ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
