ಶಿವಮೊಗ್ಗ: ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ವತಿಯಿಂದ ಪ್ರತಿಷ್ಠಿತ ಅಭಿಯಾನವಾದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಯು ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಅದ್ದೂರಿಯಾಗಿ/ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು. ಜಿಲ್ಲೆಯ ೭ ತಾಲ್ಲೂಕಿನಿಂದ ಸಂಗ್ರಹಿಸಿರುವ ಮಣ್ಣಿನ ಅಮೃತ ಕಳಶಕ್ಕೆ ನೆಹರು ಯುವ ಕೇಂದ್ರದಲ್ಲಿ ಪೂಜೆ ಸಲ್ಲಿಸಿ ದೆಹಲಿಗೆ ಕೊಂಡೊಯ್ಯುವ ಯುವಕಾರ್ಯಕರ್ತರ ತಂಡಕ್ಕೆ ಶುಭ ಹಾರೈಸಿ ರಾಷ್ಟ್ರ ಮಟ್ಟದ ಅಮೃತ ಕಳಶ ಯಾತ್ರೆಗೆ ಬೀಳ್ಕೊಡಲಾಯಿತು.
ಶಿವಮೊಗ್ಗ ಜಿಲ್ಲೆಯಿಂದ ಹೊರಟ ತಂಡವು ಬೆಂಗಳೂರಿಗೆ ತೆರಳಿ ರಾಜ್ಯ ಮಟ್ಟದ ಅಮೃತಕಳಶ ಯಾತ್ರೆಯಲ್ಲಿ ಪಾಲ್ಗೊಂಡು, ನಂತರ ವಿಶೇಷ ರೈಲಿನ ಮೂಲಕ ನವದೆಹಲಿಗೆ ತೆರಳಲಿದ್ದಾರೆ. ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ರವರು ಬೀಳ್ಕೊಡುಗೆಯ ಸಂಧರ್ಭದಲ್ಲಿ ಕಾರ್ಯಕ್ರಮ ಕುರಿತಾಗಿ ಮಾತನಾಡಿ, ಜಿಲ್ಲೆಯ ಯುವಕರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ,ಈ ಕಾರ್ಯಕ್ರಮದಲ್ಲಿ ಯುವಕ/ಯುವತಿಯರು ಭಾಗವಹಿಸುತ್ತಿರುವುದು ಜಿಲ್ಲೆಯ ಯುವಜನರಿಗೆ ಆದರ್ಶವಾಗಿದೆ. ನಮ್ಮ ಜಿಲ್ಲೆಯಿಂದ ಒಟ್ಟು ೩೪ ಯುವಕ /ಯುವತಿಯರು ತೆರಳುತ್ತಿದ್ದು ಅ. ೩೦,೩೧ ರಂದು ದೆಹಲಿಯ ಕರ್ತವ್ಯ ಪಥ್‌ನಲ್ಲಿ ನಡೆಯಲಿರುವ ಬೃಹತ್ ಅಮೃತ ಕಳಶದ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಈ ಅಮೃತ ಕಳಶದ ಮಣ್ಣಿನಲ್ಲಿ ಅಮೃತ ವಾಟಿಕಾ(ಉದ್ಯಾನವನ) ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಸ್ಮಾರಕವನ್ನು ಮಾಡಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ , ಭದ್ರಾವತಿ ಪಟ್ಟಣ ಪಂಚಾಯತ್‌ನ ಸತೀಶ್, ನೆ.ಯು.ಕೇಂದ್ರದ ಲೆಕ್ಕಾಧಿಕಾರಿ ರಮೇಶ್, ರಾಷ್ಟ್ರೀಯ ಯುವ ಕಾರ್ಯಕರ್ತರು, ಇತರರು ಹಾಜರಿದ್ದರು.