ಮಂಡ್ಯ: ಜಿಲ್ಲೆಯಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ರೈತ ಹಿತರಕ್ಷಣಾ ಸಮಿತಿ ಹೋರಾಟ ಇಂದು 54ನೇ ದಿನಕ್ಕೆ ಕಾಲಿಟ್ಟಿದೆ.
ಇಂದಿನ ಹೋರಾಟಕ್ಕೆ ಕಾರಸವಾಡಿ ಗ್ರಾಮಸ್ಥರು ಹಾಗೂ ಕಲಾವಿದರಿಂದ ಡೊಳ್ಳು ಕುಣಿತದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೇ ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಂ-ಮೈ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ತೀವ್ರವಾಗಿ ಖಂಡಿಸಿದ್ದಾರೆ.
ರಸ್ತೆಯಲ್ಲಿ ಮಲಗಿ ಡೊಳ್ಳು ಬಾರಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತಕ್ಷಣವೇ ತಮಿಳುನಾಡಿಗೆ ಹೋಗ್ತಿರೋ ನೀರು ನಿಲ್ಲಿಸಿ. ಜಂಟಿ ಅಧಿವೇಶನ ಕರೆಯಬೇಕು. ದೃಢ ನಿರ್ಧಾರ ತೆಗೆದುಕೊಳ್ಳುವ ಹೊಣೆ ರಾಜ್ಯ ಸರ್ಕಾರಕ್ಕಿದೆ. ತಕ್ಷಣವೇ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಳಿಕ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.