ಮಂಡ್ಯ: ಜನರ ಸಮಸ್ಯೆಗೆ ಸ್ಪಂದಿಸುವುದು ನಮಗೆ ಮುಖ್ಯ. ಚುನಾವಣೆಗಾಗಿ ಬಿಜೆಪಿ ಇಲ್ಲ, ಸಲ್ಲದ ವಿಚಾರ ಸೃಷ್ಟಿಸುತ್ತಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿ, ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ರಾಜಕೀಯ ಚರ್ಚೆ ನಾನು ಮಾಡಲ್ಲ, ಅಭಿವೃದ್ಧಿ ಮಾತನಾಡ್ತೀನಿ. ಹೈಕಮಾಂಡ್ ಇದೆ, ಶಾಸಕಾಂಗ ಸಭೆ ಇದೆ ಅಲ್ಲಿ ತೀರ್ಮಾನ ಮಾಡ್ತಾರೆ. ವಿರೋಧ ಪಕ್ಷದ ಜೊತೆ ಸೇರಿ ಮಾಧ್ಯಮದವರು ಕಾಂಗ್ರೆಸ್ ವಿರುದ್ಧ ಅಪ್ರಚಾರ ಮಾಡ್ತಿದ್ದಾರೆ ಎಂದರು.
ಸಿದ್ದು 5 ವರ್ಷ ಸಿಎಂ ಆಗಿರ್ತಾರೆ ಎಂಬ ಮಹದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು 50 ಜನ ಇದ್ದಾರೆ. ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡಲಿದೆ, ಈಗ ಸಿಎಂ ಸೀಟ್ ಖಾಲಿ ಇಲ್ಲ. ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಸಿದ್ದರಾಮಯ್ಯ, ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗಂಭೀರವಾಗಿ ಕೆಲಸ ಮಾಡ್ತಿದ್ದಾರೆ. ನಾವುಗಳು ಮಾತನಾಡಿ ಪ್ರಯೋಜನ ಇಲ್ಲ ಎಂದು ಹೇಳಿದರು.
ಆಣೆ ಪ್ರಮಾಣಕ್ಕೆ ಹೆಚ್ ಡಿಕೆ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಮಾಡಲು ಕೆಲಸವಿಲ್ಲ. ವರ್ಗಾವಣೆಯಲ್ಲಿ ನೇರವಾಗಿ, ಪರೋಕ್ಷವಾಗಿ ನಮ್ಮ ಹೊಣೆ ಇಲ್ಲ ಎಂದು ಧರ್ಮಸ್ಥಳದಲ್ಲಿ ಆಣೆ ಮಾಡಲಿ. ಹಳೆಯದಲ್ಲೇ ಬೇಡ ಇವತ್ತಿನದು ಬೇಕು ಅಂತಾರ? ಆಯ್ತು ಹಳೆಯದು ಬೇಡ. 2018ರ 14ತಿಂಗಳು ಆಡಳಿತ ಬಗ್ಗೆಯೇ ಆಣೆ ಮಾಡಲಿ. ದೇವೇಗೌಡರ ಬಗ್ಗೆ ನಾನು ಮಾತನಾಡಲ್ಲ. ಕುಮಾರಸ್ವಾಮಿ ಆಣೆ ಪ್ರಮಾಣದ ವಿಚಾರ ಎತ್ತಿದ್ದಾರೆ. ಅವರು ಎಲ್ಲಿಗೆ ಬಂದು ಪ್ರಮಾಣ ಮಾಡ್ತಾರೆ ಅವರೇ ಹೇಳಲಿ ಎಂದು ಕಿಡಿಕಾರಿದರು.
ಆಪರೇಷನ್ ಕಮಲ, ಹಸ್ತ ವಿಚಾರವಾಗಿ ಮಾತನಾಡಿ, ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಎರಡು ಪಕ್ಷದ ಶಾಸಕರಿಗೆ ಸಮಾಧಾನ ಇಲ್ಲ. ಹಾಗಾಗಿ ಆಪರೇಷನ್ ಕಮಲದ ವಿಚಾರ ತೆಗೆದು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರಿಗೆ 50ಕೋಟಿ ಆಫರ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರಿಗೆ ಆಫರ್ ಬಂದಿದ್ಯೋ ಗೊತ್ತಿಲ್ಲ. ಆ ವಿಚಾರ ಹೇಳಿದ ರವಿ ಪಕ್ಕದಲ್ಲೇ ಇದ್ದಾನೆ. ಅವನಿಗೆ ಏನಾದರೂ ದುಡ್ಡು ಬಂದಿದ್ದರೆ ನಮಗೂ ಕೊಡಲಿ ಎಂದು ಚಲುವರಾಯಸ್ವಾಮಿ ನಕ್ಕರು.
ಚಲುವರಾಯಸ್ವಾಮಿ ವಿರುದ್ಧ ಇಡಿ ದಾಳಿಗೆ ಷಡ್ಯಂತ್ರ ವಿಚಾರ ಕುರಿತು ಮಾತನಾಡಿ, 2 ತಿಂಗಳ ಹಿಂದಯೇ ಇಡಿಗೆ ನನ್ನ ವಿರುದ್ಧ ಮೂಗರ್ಜಿಗಳು ಹೋಗಿರುವ ಮಾಹಿತಿ ಇದೆ. ಮೈತ್ರಿ ಆದವರ ಹೊಂದಾಣಿಕೆ ಚೆನ್ನಾಗಿರಲೇಬೇಕು. ಅವರು ಏನು ಬೇಕಾದರೂ ಮಾಡಲಿ ಎಂದರು.