ಶಿವಮೊಗ್ಗ: ನಗರದ ನೂತನ ವಿಮಾನ ನಿಲ್ದಾಣದ ಬಾಂಬ್ ಥ್ರೇಟ್ ಕಂಟೆಸ್ಸರಿ ಪ್ಲಾನ್ ಅನ್ನು ಅದಷ್ಟು ಬೇಗ ನವೀಕರಿಸಬೇಕೆಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಎಂ .ಬಿ ಪಾಟೀಲ್ ಜೊತೆ ಬೆಂಗಳೂರಿನ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಅಧಿಕಾರಿಗಳು ಹಾಜರಿದ್ದು, ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯಿತು ಎಂದು ಹೇಳಿದರು.
ಈಗ ಬೆಳಗ್ಗೆ ಒಂದು ವಿಮಾನ ಬೆಂಗಳೂರು- ಶಿವಮೊಗ್ಗ ಹಾರಾಟ ನಡೆಸುತ್ತಿದೆ. ಮುಂದಿನ ವಾರದಲ್ಲಿ ಸಂಜೆ ಇನ್ನೊಂದು ವಿಮಾನ ಹಾರಾಟ ನಡೆಸಲಿದೆ. ಮುಂದಿನ ತಿಂಗಳು ೨೨ ರಿಂದ ಸ್ಟಾರ್ ಏರ್ ಲೈನ್ಸ್ ನವರು ತಿರುಪತಿ, ಗೋವಾ, ಹೈದರಾಬಾದ್ ಸೇರಿದಂತೆ ಇತರೆ ಪ್ರದೇಶಗಳಿಗೆ ಹಾರಾಟ ನಡೆಸಲಿವೆ. ಏರೋಡ್ರೋಮ್ ಸೆಕ್ಯೂರಿಟಿ ಪ್ರೋಗ್ರಾಂ ಬಾಂಬ್ ಥ್ರೆಟ್ ಕಂಟೆಸ್ಸರಿ ಪ್ಲಾನ್ ಮಾಡಿ ಮುಂದಿನ ತಿಂಗಳು ನ. ೨೩ರ ತನಕ ಲೈಸನ್ಸ್ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು. ಈ ಲೈಸನ್ಸ್ ರಿನಿವಲ್ ಮಾಡಿಸಬೇಕಿದೆ. ಮುಂದಿನ ತಿಂಗಳು ಸ್ಟಾರ್ ಏರ್‌ಲೈನ್ಸ್ ಹಾರಾಟ ಪ್ರಾರಂಭಿಸಿದರೆ, ಅವರಿಗೆ ಒಂದು ವಾರ ಕಾಲ ಮಾತ್ರ ಹಾರಾಟಕ್ಕೆ ಅವಕಾಶ ಸಿಕ್ಕಹಾಗೆ ಆಗುತ್ತದೆ. ಹೀಗಾಗಿ ಅದಷ್ಟು ಬೇಗ ಲೈಸನ್ಸ್ ರಿನಿವಲ್ ಮಾಡಬೇಕಿದೆ ಎಂದು ಸಂಸದರು ಹೇಳಿದರು.
ರಾತ್ರಿ ವಿಮಾನ ಹಾರಾಟ ಜನವರಿ ವೇಳೆಗೆ ಪ್ರಾರಂಭವಾಗಲಿದೆ.ಅಲ್ಲಿಯ ವರೆಗೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಿಂದ ತಾತ್ಕಾಲಿಕವಾಗಿ ಕೆಲ ವಸ್ತುಗಳನ್ನು ತಂದು ಜೋಡಿಸಿದರೆ, ವಿಮಾನ ಲ್ಯಾಂಡಿಂಗ್ ಗೆ ಅನುಕೂಲವಾಗಲಿದೆ. ವಿಮಾನ ಲ್ಯಾಂಡಿಂಗ್ ಮಾಡಲು ಬೇಕಾದ ವಿಸ್ಯುವಲ್ ಸೃಷ್ಟಿಸಬೇಕಿದೆ ಎಂದು ಹೇಳಿದರು. ಈಗ ಎಟಿಆರ್ ವಿಮಾನಗಳು ಮಾತ್ರ ಹಾರಾಟ ಮಾಡುತ್ತಿವೆ. ಅಲ್ಲದೆ ಏರ್‌ಶೋ ಹಾರಾಟಕ್ಕೆ ತಯಾರಿ ಮಾಡಲು ಶಿವಮೊಗ್ಗ ವಿಮಾನ ನಿಲ್ದಾಣ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡ ರುದ್ರೇಗೌಡ, ಶಾಸಕ ಚನ್ನಬಸಪ್ಪ, ದತ್ತಾತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.