ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಮಂಡ್ಯ ಜಿ.ಪಂ.ಕಾವೇರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
ಬಳಿಕ ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಉತ್ತಮ ಮಾರ್ಗದಲ್ಲಿ ನಡೆಯುವುದಕ್ಕೆ ಸಾಧಕರ ಜಯಂತಿಗಳು ಅವಶ್ಯಕ. ವಾಲ್ಮೀಕಿ ಅವರು ತಮ್ಮ ಜೀವನದಲ್ಲಿ ಅಳವಡಿಕೊಂಡಿದ್ದ ತಪ್ಪು ಮಾರ್ಗವನ್ನು ತೊರೆದು, ಮನಪರಿವರ್ತನೆ ಮಾಡಿಕೊಂಡು ಮಹಾನ್ ಋಷಿ ಆಗಿ ರಾಮಾಯಣವನ್ನು ರಚಿಸಿದರು. ಇವರ ಜೀವನ ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸಗಳ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕು ಎಂದರು.

ಕೆಲವು ಸನ್ನಿವೇಶ, ಒತ್ತಡದಿಂದ ಕೆಟ್ಟ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಬದಲಾವಣೆಗೆ ಪ್ರತಿಯೊಬ್ಬರಿಗೂ ಅವಕಾಶವಿದೆ. ಮಹಾನ್ ವ್ಯಕ್ತಿಗಳ ತತ್ವ, ಆದರ್ಶ ಹಾಗೂ ಅವರು ನಡೆದ ಬಂದ ದಾರಿಗಳು ಸದಾ ಜೀವನಕ್ಕೆ ದಾರಿ ದೀಪ ಎಂದು ತಿಳಿಸಿದರು.
ಬಳಿಕ ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಪ್ರಾಚೀನ ಕಾಲದ ಅತ್ಯುತ್ತಮ ಬರಹಗಾರ ಮತ್ತು ಗೌರವಾನ್ವಿತ ಋಷಿ. ಅವರು ಹಿಂದೂ ಧರ್ಮದ ರಾಮಾಯಣ ಮಹಾಕಾವ್ಯವನ್ನು ರಚಿಸಿದರು.
ರಾಮಾಯಣವು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಮೊದಲ ಸಂಸ್ಕೃತ ಪುಸ್ತಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.