ಪಿರಿಯಾಪಟ್ಟಣ:ರಾಮಾಯಣದಂಹ ಮಹಾನ್ ಗ್ರಂಥವನ್ನು ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ಮಾನವೀಯತೆಯೇ ಧರ್ಮ ಎಂಬದನ್ನು ಪ್ರತಿಪಾದಿಸಿದ್ದಾರೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು. ಪಟ್ಟಣದ ಡಿ.ದೇವರಾಜು ಅರಸು ಕಲಾಭವನದಲ್ಲಿ ಶನಿವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಅಖಂಡ ಭಾರತ ನಿರ್ಮಾಣಕ್ಕೆ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ. ಇವರು ರಾಮಾಯಣ ಎಂಬ ಮಹಾ ಗ್ರಂಥದಲ್ಲಿ ಸೋದರ ಸಂಬಂಧಗಳು, ಪಿತೃವಾಕ್ಯ ಪರಿಪಾಲನೆ ಮತ್ತು ಮನುಷ್ಯ ಸಂಬಂಧಗಳು, ಶತ್ರುವಿನ ಲ್ಲಿಯೂ ಮೆಚ್ಚುವಂತಹ ಗುಣಗಳು, ಮಂಥರೆಯಂತಹ ಅದ್ಬುತ ಪಾತ್ರಗಳನ್ನು ರಾಮಾಯಣ ಪರಿಚಯಿಸುತ್ತದೆ. ಹಾಗಾಗಿ
ಶ್ರೀರಾಮನನ್ನು ಕುರಿತು ಇಡೀ ಬ್ರಹ್ಮಾಂಡವೇ ಮೆಚ್ಚಿಸಿಕೊಳ್ಳುವಂತಹ ರಾಮಾಯಣ ಒಂದು ಅದ್ಬುತ ಗ್ರಂಥ. ದೇಶದ ಅನೇಕ ಭಾಷೆಗಳಲ್ಲಿ ರಾಮಾಯಣ ಮಹಾಕಾವ್ಯ ರಚನೆಯಾಗಿದ್ದರೂ ವಾಲ್ಮೀಕಿ ರಾಮಾಯಣಕ್ಕೆ ಹೆಚ್ಚು ಮಹತ್ವವಿದೆ.
ವಾಲ್ಮೀಕಿ ರಾಮಾಯಣ ನಿತ್ಯ ಕಥೆಯಾಗಿದೆಯೇ ಹೊರತು ಮಹಾಕಾವ್ಯವಲ್ಲ, ವಾಲ್ಮೀಕಿ ರಾಮಾಯಣ ಪ್ರತಿನಿತ್ಯ ನಡೆಯುವ ಘಟನೆಗಳಾಗಿವೆ. ಈ ಎಲ್ಲಾ ಆದರ್ಶಗಳನ್ನು ಬುದ್ದ, ಬಸವ, ಕನಕದಾಸ, ಅಂಬೇಡ್ಕರ್ ಅವರು ಸಹ ಬೋಧಿಸಿದ್ದು ಇವುಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ನವರು ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ನಮ್ಮ ಜನ ಬೆಂಬಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಟಿ.ಎಸ್.ಚಲುವರಾಯಿ ಮಾತನಾಡಿ
ನಾಗರಿಕತೆಯ ಬದಲಾವಣೆಗೆ ವಾಲ್ಮೀಕಿಯ ಬದುಕು ಒಂದು ಉತ್ತಮ ನಿದರ್ಶನವಾಗಿದೆ. ರಾಮಾಯಣ ಮಹಾಗ್ರಂಥದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸಾಮಾನ್ಯ ಕುಟುಂಬದಿಂದ ಬಂದ ಮಹರ್ಷಿ ವಾಲ್ಮೀಕಿ ೨೪ ಸಾವಿರ ಶ್ಲೋಕಗಳನ್ನು ರಾಮಾಯಣದಲ್ಲಿ ಬರೆದಿದ್ದಾರೆ.
ಶಾಲೆಗಳಲ್ಲಿ ರಾಮಾಯಣ ಕಥೆಗಳನ್ನು ಹೇಳುವಂತಾಗಬೇಕು. ವಾಲ್ಮೀಕಿ ರಾಮಾಯಣ ಎಲ್ಲೆಡೆ ಪಸರಿಸುವಂತಾಗಬೇಕು. ಶ್ರೀರಾಮನನ್ನು ವ್ಯಕ್ತಿಯಾಗಿ ನೋಡುವುದಲ್ಲ. ವ್ಯಕ್ತಿತ್ವವಾಗಿ ನೋಡುತ್ತೇವೆ. ಸಮಾಜದಲ್ಲಿ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದಾಗಿದೆ. ವಾಲ್ಮೀಕಿ ರಾಮಾಯಣ ಓದುವುದರಿಂದ ಹೆಚ್ಚಿನ ಜ್ಞಾನ ದೊರೆಯುತ್ತದೆ. ಬುದ್ದಿವಂತಿಕೆ ಯಾರ ಸೊತ್ತಲ್ಲ. ಅವಕಾಶಗಳು ಒಂದೊಂದು ರೀತಿ ಸಿಕ್ಕಿರುತ್ತವೆ. ಅದರಂತೆ ಅವರು ಮೇಲೆ ಬಂದಿರುತ್ತಾರೆ. ಅವಕಾಶ ವಂಚಿತರಿಗೆ ಅವಕಾಶಗಳೇ ಲಭ್ಯವಾಗುವುದಿಲ್ಲ. ಸಮಾಜದಲ್ಲಿ ಎಲ್ಲರಿಗೂ ಅವಕಾಶಗಳು ಸಿಗುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕುಂಞಿ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಹಾಜರಿದ್ದರು.