ಪಿರಿಯಾಪಟ್ಟಣ: ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ 2022-23ನೇ ಸಾಲಿನ ತಾಲ್ಲೂಕು ಪಂಚಾಯಿತಿಯ ವಿಶೇಷ ಅನುದಾನದಲ್ಲಿ ವಿಕಲ ಚೇತನರಿಗೆ ಮೂರು ಚಕ್ರದ ವಾಹನ ವಿತರಿಸಿ ಮಾತನಾಡಿದರು. ತಾಲೂಕಿನಲ್ಲಿ ಅಂಗವಿಕಲರ ಅನುದಾನದಡಿ 10 ಮಂದಿ ವಿಕಲಚೇತನರಿಗೆ ವಾಹನಗಳನ್ನು ನೀಡಿದ್ದು, ಇದರ ಸದುಪಯೋಗವನ್ನು ಫಲಾನುಭವಿಗಳೇ ಪಡೆದುಕೊಳ್ಳಬೇಕು. ವಿಕಲಚೇತನರು ಸಹ ಸಾಮಾನ್ಯ ಜನರಂತೆ ಓಡಾಡಲು ಅನುಕೂಲವಾಗಬೇಕು, ಅಂಗವಿಕಲರ ಮೇಲೆ ನಮಗೆ ಕರುಣೆ ಇರಬಾರದು. ಬದಲಾಗಿ ನಾವು ಅವರಿಗೆ ಧೈರ್ಯ ತುಂಬುವ ಮೂಲಕ ಸ್ವಂತವಾಗಿ ದುಡಿಮೆ ಮಾಡುವ ಶಕ್ತಿ ನೀಡಬೇಕೆಂಬ ದೃಷ್ಟಿಯಲ್ಲಿ ವಾಹನಗಳನ್ನು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕುಂಞಿ ಅಹಮದ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಚಂದ್ರಶೇಖರ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ಬಸವರಾಜು, ಈಚೂರು ಲೋಕೇಶ್, ಟಿ.ಈರಯ್ಯ, ಎಂ.ಲೋಕೇಶ್ , ಎ.ಕೆ.ಗೌಡ, ಸುಂಡವಾಳು ಮಹಾದೇವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.