ಮೈಸೂರು: ಭಾರತ ಸರಕಾರದ ಜವಳಿ ಮಂತ್ರಾಲಯ, ಅಭಿವೃದ್ಧಿ ಆಯುಕ್ತರು (ಕರಕುಶಲ) ಇಲಾಖೆಯ ಅಡಿಯಲ್ಲಿ ಕುಶಾಲನಗರದಲ್ಲಿ ಆಯೋಜನೆ ಮಾಡಿರುವ ಕ್ರಾಫ್ಟ್ ಅಂಡ್ ವೀವ್ಸ್ ಮಹೋತ್ಸವ-೨೦೨೩ ರಲ್ಲಿ ಕರ್ನಾಟಕ ರಾಜ್ಯದ ಚೆನ್ನಪಟ್ಟಣದ ಗೊಂಬೆಗಳು, ದೀಪಾವಳಿ ಹಬ್ಬಕ್ಕೆ ಬೇಕಾಗಿರುವ ಮಣ್ಣಿನ ದೀಪಗಳು ಜನರನ್ನು ಆಕರ್ಷಿಸುತ್ತಿದೆ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಜಾರ್ಖಂಡ್ ,ಸಿಕ್ಕಿಂ, ರಾಜ್ಯದ ಸೀರೆಗಳು ಕಣ್ಣಿಗೆ ಆನಂದವನ್ನು ನೀಡುತ್ತಿದೆ.
ಉತ್ತರ ಪ್ರದೇಶ ರಾಜ್ಯದ ಕೈಮಗ್ಗ ಕುರ್ತಿ ಗಳಿಗೆ ಬಹಳ ಬೇಡಿಕೆ ಇದೆ. ಕರ್ನಾಟಕ ರಾಜ್ಯದ ಕೈ ಮಗ್ಗದ ಸೀರೆಗಳಾದ ಇಲಕಲ್ ಮತ್ತು ಕಸೂತಿ ಸೀರೆಗಳು, ಡ್ರೆಸ್ ಮೆಟೀರಿಯಲ್ಗಳು ಮಹಿಳೆಯರ ಮನಸ್ಸನ್ನು ಸೆಳೆಯುತ್ತಿದೆ.

ಗೋವ ರಾಜ್ಯದ ಬೆಡ್ ಶೀಟ್ ಗಳಂತೂ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ. ಯುವಕರಿಗೆ ಅಚ್ಚುಮೆಚ್ಚಿನ ಖಾದಿ ಶರ್ಟುಗಳು ಕೂಡ ಮೇಳ ದಲ್ಲಿ ಲಭ್ಯವಿದೆ. ಮೆಘಾಲಯ ರಾಜ್ಯದ ಬಿದಿರಿನಿಂದ ತಯಾರಿಸಿದ ಬುಟ್ಟಿಗಳು ಮಹಿಳೆಯರ ಬ್ಯಾಗುಗಳು ಮೇಳದ ಇನ್ನೊಂದು ಆಕರ್ಷಣೆಯಾಗಿದೆ. ಮಹಿಳೆಯರ ಅಂದವನ್ನು ಹೆಚ್ಚಿಸುವ ಮುತ್ತಿನ ಹಾರಗಳಂತೂ ಜನರನ್ನು ಕೈಬೀಸಿ ಕರೆಯುತ್ತಿದೆ.
ಈ ಮೇಳದಲ್ಲಿ ಕರ್ನಾಟಕ ರಾಜ್ಯದ ಮತ್ತು ದೇಶದ ವಿವಿಧ ರಾಜ್ಯಗಳ ಸುಮಾರು ೩೦ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಮತ್ತು ಕೈಮಗ್ಗ ನೇಕಾರರು ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. ಈ ಮೇಳ ನವೆಂಬರ್ ೧ ಮುಕ್ತಾಯಗೊಳ್ಳಲಿದೆ . ಈ ಮೇಳಕ್ಕೆ ಉಚಿತ ಪ್ರವೇಶವನ್ನು ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.
