ಮೈಸೂರು : ಇನ್ನು ಹತ್ತು ದಿನದಲ್ಲಿ ರೈತರಿಗೆ ಕಬ್ಬಿನ ಹೆಚ್ಚುವರಿ ದರ ಕೊಡಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರಿನ ಮನೆಯ ಎದುರು ನ.೯ ರಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ ತೀರ್ಮಾನಿಸಿದೆ.
ನಗರದ ಪಿಡಿಡಬ್ಲ್ಯೂ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ನಿಗದಿ ಮಾಡಿದ್ದ ಕಬ್ಬಿನ ಹೆಚ್ಚುವರಿ ದರ ಟನ್‌ಗೆ ೧೫೦ ರೂ. ಕೊಡಿಸಲು, ಪ್ರಸಕ್ತ ಸಾಲಿನ ದರ ಏರಿಕೆ ಮಾಡಲು ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ ೩೫೮೦ ರೂ. ಆದರೆ ಸರ್ಕಾರ ೩೧೫೦ ನಿಗದಿ ರೂ. ಮಾಡಿದೆ. ಕೂಡಲೇ ಪರಿಷ್ಕರಣೆ ಮಾಡಿ ನ್ಯಾಯಯುತ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ಹತ್ತು ದಿನದ ಗಡುವಿನೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಸರ್ಕಾರದ ಆದೇಶ ಧಿಕ್ಕರಿಸಿರುವ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ರೈತರ ಹಣ ಕೊಡಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಹದಗೆಡುವ ಮುನ್ನವೇ ರೈತರಿಗೆ ನ್ಯಾಯ ಕೊಡಿಸಬೇಕು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯೋತ್ಸವದ ೫೦ ವರ್ಷಗಳ ಆಚರಣೆ ನಡೆಸುತ್ತಿರುವ ರಾಜ್ಯ ಸರ್ಕಾರ, ಎಲ್ಲ ಕಂದಾಯ ಹಾಗೂ ಇತರೆ ಇಲಾಖೆಗಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿಯೇ ವಾದ, ವಿವಾದ, ಆದೇಶಗಳನ್ನು ನೀಡುವಂತೆ ಕಠಿಣ ಕಾನೂನು ಆದೇಶ ಹೊರಡಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ಜಮಖಂಡಿ ಉಪವಿಭಾಗಾಕಾರಿ ಸಂತೋಷ್ ಕಾಮಗೌಡ ಈ ಕಾರ್ಯ ಮಾಡಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಇದೇ ರೀತಿ ರಾಜ್ಯಾದ್ಯಂತ ಜಾರಿ ಮಾಡಲಿ ಎಂದು ಹೇಳಿದರು.ಮಾಧ್ಯಮಗೋಷ್ಟಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನುರ ನಾಗರಾಜ್, ಹಳಿಕರೆಹುಂಡಿ ಬಾಗ್ಯರಾಜ್, ಕಿರಗಸೂರ ಶಂಕರ, ಕುರುಬೂರು ಸಿದ್ದೇಶ್, ಹಾಡ್ಯರವಿ, ಪಟೇಲ್ ಶಿವಮೂರ್ತಿ, ಲಕ್ಷ್ಮಿಪುರ ವೆಂಕಟೇಶ, ಮಹದೇವಸ್ವಾಮಿ, ಸುನಿಲ್, ನೀಲಕಂಠಪ್ಪ, ಕಮಲಮ್ಮ, ಮಂಜುನಾಥ, ಮಹದೇವ ನಾಯಕ, ಪ್ರದೀಪ್ ಹಾಜರಿದ್ದರು.