ಬೆಳಗಾವಿ : ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಭುವನೇಶ್ವರಿ ದೇವಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪೂಜೆ ಸಲ್ಲಿಸಿದರು. ಬಳಿಕ ಹಳದಿ-ಕೆಂಪು ಬಣ್ಣದ ಬಲೂನ್‌ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಕನ್ನಡ ನಾಡು ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಸಂಗಮವಾಗಿದೆ. ಪ್ರಾಚೀನ ಕಾಲದಿಂದಲೂ ತನ್ನದೇ ಆದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಸಾಮರಸ್ಯವೇ ಕನ್ನಡ ಸಂಸ್ಕೃತಿಯ ಜೀವಾಳ. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕು. ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಲು ಪಣ ತೊಡೋಣ. ಕರ್ನಾಟಕವು ಸಹಬಾಳ್ವೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ತವರು ಮನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಗಮನ ಸೆಳೆದ ಪಥಸಂಚಲನ : ಇದಕ್ಕೂ ಮೊದಲು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಪೊಲೀಸ್, ವಿದ್ಯಾರ್ಥಿಗಳು ಸೇರಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರು ಗೌರವವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ ಒಟ್ಟು ೨೫ ಮಹನೀಯರಿಗೆ ಜಿಲ್ಲಾಡಳಿತದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಜಿಲ್ಲಾಧಿಕಾರಿ ನಿತೇಶ್? ಪಾಟೀಲ, ಜಿಪಂ ಸಿಇಒ ಹರ್ಷಲ್ ಭೊಯರ್, ಐಜಿಪಿ ವಿಶಾಸಕುಮಾರ ವಿಕಾಶ, ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.