ಮೈಸೂರು: ನವೆಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ ರಾಜ್ಯೋತ್ಸವ ಸಂಭ್ರಮ. ಆದರೆ ಮೈಸೂರು ಅರಮನೆಯ ಆವರಣದಲ್ಲಿ ಮಹಾರಾಜರು ಕಟ್ಟಿಸಿದ ಭುವನೇಶ್ವರಿ ದೇವಾಲಯದಲ್ಲಿ ವರ್ಷಪೂರ್ತಿ ಪೂಜೆ ನಡೆಯುತ್ತದೆ. ಭುವನೇಶ್ವರಿ ತಾಯಿಯನ್ನು ಪ್ರತಿದಿನವೂ ಪೂಜಿಸುವ ದೇವಾಲಯ ಅರಮನೆಯ ಆವರಣದಲ್ಲಿದೆ. ಈ ದೇವಾಲಯದ ನಿರ್ಮಾಣವಾದ ಹಿನ್ನೆಲೆ ಏನು ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆಯ ಆವರಣದಲ್ಲಿ ೯ ದೇವಾಲಯಗಳಿದ್ದು, ಅದರಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಾಲಯವು ಒಂದು. ಅದಲ್ಲದೆ ದೇವಾಲಯದ ಆವರಣದಲ್ಲಿ ಬನ್ನಿ ಮರ ಕೂಡ ಇರುವುದು ವಿಶೇಷವಾಗಿದೆ. ಅರಮನೆಯ ಮುಂಭಾಗದ ಬಲರಾಮ ದ್ವಾರಕ್ಕೆ ಹೋಗುವ ಮಾರ್ಗದಲ್ಲಿರುವ ಭುವನೇಶ್ವರಿ ದೇವಾಲಯವನ್ನು ಜಯಚಾಮರಾಜೇಂದ್ರ ಒಡೆಯರ್ ಕಳೆದ ೭೦ ವರ್ಷಗಳ ಹಿಂದೆ ಕಟ್ಟಿಸಿದ್ದರು.
ರಾಜ್ಯೋತ್ಸವದ ದಿನ ನವೆಂಬರ್ ೧ ರಂದು ಪ್ರತಿವರ್ಷ ಭುವನೇಶ್ವರಿ ದೇವಾಲಯದಲ್ಲಿ ಜಿಲ್ಲಾಡಳಿತದಿಂದ ವಿಶೇಷ ಪೂಜೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಭುವನೇಶ್ವರಿಗೆ ಬೆಳ್ಳಿಯ ಕವಚ ಹಾಕಿ, ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗಿನಿಂದಲೇ ಪಂಚಾಮೃತ ಅಭಿಷೇಕ ಮಾಡಿ, ವಿಶೇಷವಾಗಿ ಅಲಂಕರಿಸಲಾಗಿದೆ. ಇದರ ಜೊತೆಗೆ ಚಾಮುಂಡೇಶ್ವರಿ ವರ್ಧಂತಿ, ಶಿವರಾತ್ರಿ, ಮಹಾಲಯ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಅಲಂಕಾರದ ಜೊತೆಗೆ ವಿಶೇಷ ಪೂಜೆ ಸಹ ಮಾಡಲಾಗುತ್ತದೆ ಎಂದು ಅರ್ಚಕ ಸೂರ್ಯನಾರಾಯಣ ಶಾಸ್ತ್ರಿ ತಿಳಿಸಿದರು.
ಈ ದೇವಾಲಯ ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ರಾಜ್ಯದಲ್ಲಿ ಇರುವ ಅತಿ ದೊಡ್ಡ ಭುವನೇಶ್ವರಿ ದೇವಾಲಯ ಎಂಬ ಖ್ಯಾತಿಯನ್ನು ಪಡೆದಿರುವುದು ಇದರ ಮತ್ತೊಂದು ಹೆಗ್ಗಳಿಕೆ.