ಚನ್ನಪಟ್ಟಣ: ನಾಡಿನ ಪ್ರತಿಯೊಬ್ಬರಲ್ಲಿ ಕನ್ನಡ ಪ್ರೇಮ ಬೆಳೆಸುವಂತಾಗಲು ಪ್ರತಿಯೊಬ್ಬರು ಕನ್ನಡ ದಿನ ಪತ್ರಿಕೆಗಳನ್ನು ಓದುವಂತಾಗಬೇಕು ಎಂದು ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಿಸಿದರು. ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ನಿರಂತರ ಹೋರಾಟದ ಪ್ರತಿಜ್ಞೆ ಮಾಡಿದ್ದು ಬುಧವಾರ ನಡೆದ ಇಪ್ಪತ್ತೆಂಟನೆ ದಿನದ ಹೋರಾಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ದಿನ ಪತ್ರಿಕೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಇಂದು ಜನತೆ ಸ್ಮಾರ್ಟ್‌ಫೋನ್‌ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲಾ ವಿಚಾರವನ್ನು ಕುಳಿತಲ್ಲೇ ನೋಡುವಂತಾಗಿರುವ ನಿಟ್ಟಿನಲ್ಲಿ ಕನ್ನಡ ದಿನಪತ್ರಿಕೆ ಸಂಸ್ಥೆಗಳು ನಶಿಸುತ್ತಿವೆ. ಜೊತೆಗೆ ಜನತೆಯಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲೂ ಕನ್ನಡ ಪತ್ರಿಕೆಗಳನ್ನು ಮನೆಗಳಿಗೆ ತಲುಪಿಸಿ ಕನ್ನಡ ಪ್ರೇಮ ಬೆಳೆಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಅಪಾರವಾಗಿದ್ದು, ಇದರಲ್ಲಿ ಶಿವಮಾದು ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿ ವೇದಿಕೆಯಿಂದ ಸ್ಮಾನಿಸಿ ಅಭಿನಂದಿಸಿದರು.
ಕಾವೇರಿ ನೀರು ಹಂಚಿಕೆ ಸಮಸ್ಯೆಯಂತೆ ಮುಂದೆ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಮುಂದಾಗಬೇಕಾದ ಸಮಯ ಬಂದರೂ ಅಚ್ಚರಿ ಇಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕನ್ನಡ ದಿನಪತ್ರಿಗಳನ್ನು ಓದುವ ಅಭ್ಯಾಸ ಮಾಡಿಕೊಂಡು ಕನ್ನಡ ಭಾಷೆಯನ್ನು ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸದ ಪ್ರಯುಕ್ತ ಶಿವಮಾಡು ಅವರು ಉಚಿತವಾಗಿ ಕನ್ನಡ ದಿನ ಪತ್ರಿಕೆಗಳನ್ನು ವಿತರಣೆ ಮಾಡಿ ಮನೆ ಮನೆಯಲ್ಲಿ ಕನ್ನಡ ಸಾಹಿತ್ಯ ಪ್ರೇಮ ಬೆಳಗುವಂತೆ ಮಾಡಿದ್ದಾರೆ ಎಂದು ಬಣ್ಣಿಸಿದರು. ಪತ್ರಿಕಾ ವಿತರಕರಾದ ಶಿವಮಾದು ಮಾತನಾಡಿ, ಮಾತನಾಡಿ, ಕನ್ನಡ ಪತ್ರಿಕೆಗಳನ್ನು ಕೊಂಡು ಹೋಗಿ ಕನ್ನಡ ಭಾಷೆ ಉಳಿಸಿ, ಕನ್ನಡ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಚಿತವಾಗಿ ಕನ್ನಡ ದಿನಪತ್ರಿಕೆಗಳನ್ನು ವಿತರಣೆ ಮಾಡಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚಿಸಿ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಕಜ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಶುಭೋಧಯ ಸಾಂಸ್ಕೃತಿಕ ಸ್ನೇಹ ಬಳಗದ ವತಿಯಿಂದ ಸಂಪೂರ್ಣ ಬೆಂಬಲ ನೀಡಿ ಮುಂದೆಯೂ ಅವರ ಹೋರಾಟದ ಜೊತೆ ಇರುತ್ತೇವೆ ಎಂದು ಹೇಳೀದರು.
ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೀಶ್ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಎಂದರೆ ಹೋರಾಟಗಳಿಗೆ ಮಾತ್ರ ಸೀಮಿತವಲ್ಲ. ಮುಂಜಾನೆ ಎದ್ದು ಪತ್ರಿಕೆ ಹಂಚುವ ಸಿಬ್ಬಂದಿಗಳನ್ನು ಒಗ್ಗೂಡಿಸಿ ಪ್ರತಿ ಮನೆಗೂ ಕನ್ನಡ ದಿನ ಪತ್ರಿಕೆಗಳಲ್ಲಿ ವಿತರಣೆ ಮಾಡುವುದು ಸಹ ಕನ್ನಡ ಕಟ್ಟುವ ಕೆಲಸವಾಗಿದೆ. ಕಕಜ ವೇದಿಕೆಯ ರಮೇಶ್‌ಗೌಡರು ಕನ್ನಡ ನಾಡು, ನುಡಿ, ಜಲದ ಉಳಿವಿಗೆ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದು ಇದೀಗ ಕಾವೇರಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಇಡುವಂತೆ ಆಗ್ರಹಿಸಿ ೨೮ ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು ಇವರ ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲ ನೀಡಬೇಕು ಎಂದು ಅಭಿಪ್ರಾಯಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಸಿಗದಂತಾಗಿದೆ. ಇಂತಹ ಸಂದರ್ಭದಲ್ಲಿ ಮನೆಮನೆಗಳಿಗೆ ಕನ್ನಡ ಪತ್ರಿಕೆ ಹಂಚುವ ಮೂಲಕ ಕನ್ನಡ ಭಾಷೆಯ ಮೇಲೆ ಪ್ರೇಮ ಬೆಳೆಸುತ್ತಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯವಾಗಿದ್ದು, ರಾಜ್ಯೋತ್ಸವದ ಪ್ರಯುಕ್ತ ಉಚಿತ ಪತ್ರಿಕೆ ವಿತರಣೆ ಮಾಡುತ್ತಿರುವುದು ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲೆ ಮತ್ತಷ್ಟು ಅಭಿಮಾನ ಮೂಡಿಸಲು ಸಹಕಾರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ ಬೆಂಕಿ ಶ್ರೀಧರ್, ರಂಜಿತ್‌ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಕೂರಣಗೆರೆ ಕೃಷ್ಣಪ್ಪ, ಬೈರಾಪಟ್ಟಣ ಸತೀಶ್, ರ್‍ಯಾಂಬೋ ಸೂರಿ, ಚಿಕ್ಕೇನಹಳ್ಳಿ ಸುಧಾಕರ್, ವಿರುಪಾಕ್ಷಿಪುರ ಮಂಗಳಮ್ಮ, ಟೊಯೋಟಾ ವೆಂಕಟರಮಣ, ಚಿಕ್ಕಣ್ಣಪ್ಪ, ನಿ. ಶಿಕ್ಷಕ ಪುಟ್ಟಪ್ಪಾಜಿ, ಸಿದ್ದಪ್ಪಾಜಿ, ರಮೇಶ್, ಹೊಂಗನೂರು ಪುಟ್ಟರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.