ಚಾಮರಾಜನಗರ: ಕಾಡಿನ ಪೋಡಿಗಳಲ್ಲಿ ವಾಸ ಮಾಡುವ ಜನರ ಇಷ್ಟು ದಿನದ ಕೂಗಿಗೆ ಈಗ ಜೀವ ಬಂದಂತಾಗಿದೆ. ಜನವನ ಕಾರ್ಯಕ್ರಮವನ್ನ ಜಾರಿಗೆ ತಂದು ಅರ್ಧಕ್ಕೆ ನಿಲ್ಲಿಸಿದ್ದ ಪ್ರಾಧಿಕಾರ ಮತ್ತೆ ಎಚ್ಚೆತ್ತುಕೊಂಡಿದೆ. ಇಂದು ಅಧಿಕೃತವಾಗಿ ಜನವನ ಯೋಜನಾ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದೆ. ಕಾಡಂಚಿನ ಜನರಲ್ಲಿ ಈ ಯೋಜನೆ ಮಂದಹಾಸ ಮೂಡಿಸಿದೆ. ಉಸ್ತುವಾರಿ ಸಚಿವ ಕೆ ವೆಂಕಟೇಶ್ ಅವರು ಪೂಜೆ ಸಲ್ಲಿಸುವ ಮೂಲಕ ಜನವನ ಸಾರಿಗೆಗೆ ಚಾಲನೆ ನೀಡಿದ್ದಾರೆ. ಶಾಸಕ ಮಂಜುನಾಥ್, ಡಿಸಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹೋ ಸೇರಿದಂತೆ ಇತರ ಅಧಿಕಾರಿಗಳು ಭಾಗಿಯಾಗಿದ್ದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಅರಣ್ಯ ವ್ಯಾಪ್ತಿಯಲ್ಲಿ ೧೮ಕ್ಕೂ ಹೆಚ್ಚು ಗ್ರಾಮಗಳಿವೆ. ಈ ಗ್ರಾಮದ ಜನರ ಸ್ಥಿತಿ ಬಹಳ ಶೋಚನೀಯವಾಗಿತ್ತು. ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಕಾಡು ಪ್ರಾಣಿಗಳ ಭಯದ ನಡುವೆ ಹೆಜ್ಜೆ ಹಾಕುವ ಪರಿಸ್ಥಿತಿಯಿತ್ತು. ಅನೇಕ ಮಕ್ಕಳು ಈ ಭಯಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಇನ್ನು ಪೋಷಕರು ಕೂಡ ಭಯದಿಂದ ಮಕ್ಕಳಿಗೆ ಶಾಲೆ ಬಿಡಿಸಿ ಮನೆಯಲ್ಲಿ ಕೂರಿಸಿದ್ದಾರೆ. ಈ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯ ಕೂಡ ಮರೀಚಿಕೆ. ಪಡಿತರ ಪಡೆಯಬೇಕಾದರೆ ಹತ್ತಾರು ಕಿ.ಮೀ ಸಾಗಬೇಕು. ಅಲ್ಲಿಂದ ಪಡಿತರ ಹೊತ್ತು ನಡೆದುಕೊಂಡೇ ಮನೆಗೆ ಹೋಗುವ ಪರಿಸ್ಥಿತಿ. ಕಾಡು ಪ್ರಾಣಿಗಳ ದಾಳಿಯಿಂದ ಸತ್ತ ನಿದರ್ಶನ ಕೂಡ ಸಾಕಷ್ಟಿದೆ.
ಡೋಲಿ ಕಟ್ಟಿಕೊಂಡು ಗ್ರಾಮದ ಒಂದಷ್ಟು ಜನರು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸುತ್ತಿದ್ದ ಘಟನೆಗಳು ಬಹಳ. ದಾರಿ ಮಧ್ಯೆಯೇ ಗರ್ಭೀಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗು ಸಾವನ್ನಪ್ಪಿದ್ದ ಘಟನೆ ಕೂಡ ನಡೆದಿದೆ. ಅದೇ ರೀತಿ ರೋಗಿಗಳು ಸಾವನ್ನಪ್ಪಿದ್ದಾರೆ. ನಮಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಿ ಅನ್ನೋ ಕೂಗು ಬಹಳ ವರ್ಷಗಳಿಂದ ಕೇಳಿ ಬಂದಿತ್ತು. ಹೀಗಾಗಿ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿದ್ದರು. ೨೪*೭ ವಾಹನ ಸೌಲಭ್ಯ ಒದಗಿಸಿದ್ದರು. ಆದರೆ ಯೋಜನೆ ಆರಂಭವಾದ ಮೂರು ತಿಂಗಳೊಳಗೆ ನಿರ್ವಹಣೆ ಕೊರತೆಯಿಂದ ಜನವನ ಸಾರಿಗೆ ಸೇವೆ ಸ್ಟಾಪ್ ಆಗಿತ್ತು. ಹೀಗೆ ಅರ್ಧಕ್ಕೆ ನಿಂತಿದ್ದ ಯೋಜನೆಗೆ ಈಗ ಮತ್ತೆ ಮರು ಜೀವ ಬಂದಿದೆ. ಇಂದು ಜನವನ ಸಾರಿಗೆಗೆ ಮತ್ತೆ ಚಾಲನೆ ನೀಡಲಾಗಿದೆ.
ದುರ್ಗಮ ಹಾದಿಯಲ್ಲಿ ಸಂಚಾರ ಮಾಡಲು ಹೆದರುತ್ತಿದ್ದ ಜನರು ಇದೀಗಾ ಜನವನ ಸಾರಿಗೆ ಆರಂಭದಿಂದ ನಿಟ್ಟುಸಿರು ಬಿಡುವಂತಾಗಿದೆ. ಅನಾರೋಗ್ಯಕ್ಕೆ ತುತ್ತಾದವರು, ಶಾಲಾ ಮಕ್ಕಳಿಗೆ ಸೌಲಭ್ಯ ಸಿಕ್ಕಿದಂತಾಗಿದೆ.
