Sunday, April 20, 2025
Google search engine

Homeಸ್ಥಳೀಯಕ್ರೀಡೆ ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರ: ಡಾ.ಹೆಚ್.ಸಿ.ಮಹದೇವಪ್ಪ

ಕ್ರೀಡೆ ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರ: ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು: ಕ್ರೀಡೆಯು ವಿಶ್ವಮಾನವ ಸಂದೇಶ ಸಾರುವ ಕ್ಷೇತ್ರವಾಗಿದ್ದು, ಎಲ್ಲಾ ಸೀಮಾರೇಖೆಗಳನ್ನು ಮೀರಿ ಕ್ರೀಡೆಯನ್ನೇ ಒಂದು ಮನೋಧರ್ಮವಾಗಿ ಬೆಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸರ್ಕಾರಿ ಸಿ.ಪಿ.ಸಿ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಗುರುವಾರ ಚಾಮುಂಡಿ ವಿಹಾರ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ 44ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಮೈಸೂರಿನಲ್ಲಿ ಅದ್ಧೂರಿ ದಸರೆ ನಂತರ ರಾಜ್ಯಮಟ್ಟದ ಅದ್ಧೂರಿ ಅಂತರ ಕ್ರೀಡಾಕೂಟ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಚಾರ. ಕ್ರೀಡೆ ಎಂಬುದು ಮನುಷ್ಯನಿಗೆ ಅತ್ಯಂತ ಉತ್ಸಾಹದಾಯಕ ಕ್ಷೇತ್ರವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ಸದಾ ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಸ್ನೇಹ ಸಂಬಂಧಗಳನ್ನು ಹೊಂದಿರುತ್ತಾರೆ ಎಂದು ಹೇಳಿದರು.

ವಿದ್ಯೆಯ ಜೊತೆಗೆ ಮಾನಸಿಕ ಹಾಗೂ ದೈಹಿಕ ಸಾಮಾರ್ಥ್ಯವನ್ನು ಸಮತೋಲನತೆಯೆಡೆಗೆ ಕೊಂಡೊಯ್ಯಲು ಕ್ರೀಡಾಭ್ಯಾಸ ಅತ್ಯುತ್ತಮ ಸಾಧನವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚರಿತ್ರೆಯನ್ನು ನಿರ್ಮಾಣ ಮಾಡುವಂಥ ದೃಢಸಂಕಲ್ಪವನ್ನು ವಿದ್ಯೆ ಹಾಗೂ ಕ್ರೀಡೆಯಲ್ಲಿ ಪ್ರದರ್ಶಿಸಿ, ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯುವಂತಾಗಲಿ ಎಂದು ಆಶಿಸಿದರು.

ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ, ಜೀವನದ ಎಲ್ಲಾ ಹಂತಗಳಲ್ಲೂ ಮೌಲ್ಯ ಕುಸಿಯುತ್ತಿರುವ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಗುರುವಿನ ಮೌಲ್ಯ ಉಳಿಸಿಕೊಂಡಿದೆ. ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅದರಂತೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಬಹುಮುಖ್ಯ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ 97  ಕಾಲೇಜುಗಳಿಂದ 2221 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎಂ.ಸುರೇಶ್ ಕುಮಾರ್, ಜಂಟಿ ನಿರ್ದೇಶಕ ಜಿ.ಶ್ರೀಕಾಂತ್, ಉಪ ನಿರ್ದೇಶಕಿ ಎಸ್ .ಮಂಜುಳಾ, ಸಹಾಯಕ ನಿರ್ದೇಶಕ ದೊಡ್ಡಮನಿ, ಅಭಿವೃದ್ದಿ ಅಧಿಕಾರಿ ಡಾ.ಮಾರುತಿ, ಸಿ.ಪಿ.ಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular