ಹನೂರು: ಕೊಂಬುಡಿಕ್ಕಿ ಸೋಲಿಗರ ಹಾಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಸೋಲಿಗರ ಸಮಸ್ಯೆಗಳನ್ನು ಆಲಿಸಿದರು.
ಮಹದೇಶ್ವಬೆಟ್ಟದಿಂದ ಗುರುವಾರದಂದು ನೇರವಾಗಿ ಕೊಂಬುಡಿಕ್ಕಿ ಹಾಡಿಗೆ ತೆರಳಿದ ಸಚಿವರು ಇಲ್ಲಿನ ಸೋಲಿಗರೊಂದಿಗೆ ಕೆಲಕಾಲ ಸಂವಾದ ನಡೆಸಿದರು.
ಈ ವೇಳೆ ಕೊಂಬುಡಿಕ್ಕಿಗೆ ಸೂಕ್ತ ರಸ್ತೆ, ಕುಡಿಯುವ ನೀರು, ಮನೆ ನಿರ್ಮಾಣ, ಬಸ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಸಚಿವರಲ್ಲಿ ಮನವಿ ಮಾಡಿದರು.
ಅಲ್ಲದೇ ಹಾದಿಯಲ್ಲಿರುವ ಶಾಲೆ, ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿದ್ದು, ರಿಪೇರಿ ಮಾಡಿಸುವಂತೆ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಹಾಡಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಮನೆಗಳನ್ನು ನಿರ್ಮಿಸಿಕೊಡಲು ಕ್ರಮವಹಿಸಲಾಗುವುದು, ಅಲ್ಲದೇ ಶಿಥಿಲಗೊಂಡಿರುವ ಶಾಲೆ, ಅಂಗನವಾಡಿ ಕಟ್ಟಡಗಳನ್ನು ರಿಪೇರಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾಡಿಯಲ್ಲಿ ಎಷ್ಟು ಪಡಿತರ ಕಾರ್ಡುಗಳಿವೆ. ಎಲ್ಲರಿಗೂ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಸರಿಯಾಗಿ ಆಗುತ್ತಿದೆಯೇ? ಎಂದು ಸಚಿವರು ಪ್ರಶ್ನಿಸಿದರು. ಅಲ್ಲದೇ ಗೃಹಲಕ್ಷ್ಮಿ’ ಯೋಜನೆಯಡಿ ಎಲ್ಲರಿಗೂ ಹಣ ಬರುತ್ತದೆಯೇ, ಜೊತೆಗೆ ಅಕ್ಕಿ ಹಣ ಕೂಡ ಬರುತ್ತದೆಯೇ ಯಾವುದೇ ಸಮಸ್ಯೆ ಇಲ್ಲವ ಎಂದು ಪ್ರಶ್ನಿಸಿದರು.
ಗೃಹಲಕ್ಷ್ಮೀ ಹಣ ಖಾತೆಗೆ ಸರಿಯಾಗಿ ಬರುತ್ತಿದೆಯೇ ಎಂದು ಸಚಿವರು ಮಹಿಳೆಯರಲ್ಲಿ ಪ್ರಶ್ನಿಸಿದರು. ಇದಕ್ಕೆ ಮಹಿಳೆಯರು ಬಂದಿದೆ ಎಂದು ಉತ್ತರಿಸಿದರು. ಕೆಲ ಪಡಿತರ ಕಾರ್ಡುಗಳಲ್ಲಿ ಮೊದಲು ಯಜಮಾನಿಯ ಹೆಸರಿಲ್ಲದ ಕಾರಣ ಅರ್ಜಿ ಸಲ್ಲಿಸಲು ಆಗಿಲ್ಲ ಎಂದು ಕೆಲವರು ಸಚಿವರ ಗಮನಕ್ಕೆ ತಂದರು. ಅಲ್ಲದೇ ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು ಮಸೇಜ್ ಬಂದರೂ ಇನ್ನೂ ಅನೇಕರಿಗೆ ಒಂದು ಕಂತಿನ ಹಣ ಬಂದಿಲ್ಲ. ಎಂದು ನಿವಾಸಿಗಳು ಹೇಳಿದರು.
ಹಾಡಿಯಲ್ಲಿ ಸಮುದಾಯ ಭವನ ಇಲ್ಲ. ಆದ್ದರಿಂದ ಸಮುದಾಯ ಭವನ ನಿರ್ಮಾ ಮಾಡಿಕೊಡಬೇಕು, ಅಲ್ಲದೇ ಅನೇಕ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ. ಅವನಿಗೂ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಲಾಯಿತು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ ಮನೆ ಇಲ್ಲದವರ ಸರ್ವೆ ಮಾಡಿಸಿ ವರದಿ ಕಳುಹಿಸಲಾಗುವುದು ಎಂದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಕೇವಲ ಇದೊಂದೇ ಹಾಡಿಯ ಸರ್ವೆ ಬೇಡ. ಎಲ್ಲ ಹಾಡಿಗಳ ಸರ್ವ ಮಾಡಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸೋಲಿಗ ಕುಟುಂಬಗಳಿಗೆ ಪರಿಶಿಷ್ಟ ಪಂಗಡಗಳ ಇಲಾಖೆ ವತಿಯಿಂದ ಆಹಾರ ಪದಾರ್ಥಗಳನ್ನು ಸಚಿವರು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ಆರ್.ಮಂಜುನಾಥ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪಲ್ಟಿನಿಸಾಹು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಇಒ ಉಮೇಶ್ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀದ್ ಮಠದ್ ಬಿ ಇ ಒ ಶಿವರಾಜ್ ಡಿವೈಎಸ್ಪಿ ಪಿ ಸೋಮೇಗೌಡ ಹನೂರು ಇನ್ಸಪೆಕ್ಟರ್ ಶಶಿಕುಮಾರ್
ಗ್ರಾಮದ ಆಡಳಿತಾಧಿಕಾರಿ ವಿನೋದ್ ಪಿಡಿಒ ಕಿರಣ್ ಹಾಗೂ ಗ್ರಾಪಂ ಸದಸ್ಯ ಕುಮಾರ್ ಹಾಗೂ ಇನಿತರರಿದ್ದರು.