ಹುಣಸೂರು : ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಶೆಟ್ಟಿಹಳ್ಳಿ, ಕೊಳವಿಗೆ ಆಶ್ರಮಶಾಲೆ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಉಚಿತವಾಗಿ ಔಷಧಿ ವಿತರಿಸಲಾಯಿತು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ಮಾತನಾಡಿ, ಇದು ೬ನೇ ಉಚಿತ ಆರೋಗ್ಯ ಶಿಬಿರವಾಗಿದ್ದು, ೧೨ ಆಶ್ರಮ ಶಾಲೆಯ ಮಕ್ಕಳಿಗೆ ತಪಾಸಣೆ ನಡೆಸಲಾಗಿದೆ, ಜೆ.ಎಸ್.ಎಸ್. ಉನ್ನತ ಶಿಕ್ಷಣ ಸಂಸ್ಥೆ, ವಾಕ್ ಮತ್ತು ಶ್ರವಣ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ೩೦ಕ್ಕೂ ಹೆಚ್ಚು ತಜ್ಞವೈದ್ಯರು ಭಾಗವಹಿಸಿದ್ದಾರೆ.
ಶೆಟ್ಟಿಹಳ್ಳಿ ಆಶ್ರಮ ಶಾಲೆಯ ೮೦ ಮಕ್ಕಳು ಕೊಳವಿಗೆ ಆಶ್ರಮಶಾಲೆಯ ೬೦ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಶಿಬಿರದಲ್ಲಿ ಕಿವಿ, ಮೂಗು, ಗಂಟಲು, ವಾಕ್ ಮತ್ತು ಶ್ರವಣ ಪರೀಕ್ಷೆ, ದಂತ ಚಿಕಿತ್ಸೆ, ನೇತ್ರತಪಾಸಣೆ, ರಕ್ತಪರೀಕ್ಷೆ, ಆರೋಗ್ಯ ತಪಾಸಣೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಮೈಸೂರಿಗೆ ಕರೆತಂದು ನಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತೇವೆ. ಈ ಎರಡು ಶಾಲೆಗಳಲ್ಲಿ ಜೇನುಕುರುಬ ಮಕ್ಕಳೇ ಹೆಚ್ಚಾಗಿವೆ ಎಂದ ಅವರು, ಎಷ್ಟೋ ಮಕ್ಕಳು ಚಿಕಿತ್ಸೆಗೆ ಬರದೆ ಮನೆಯಲ್ಲೆ ಉಳಿದುಕೊಂಡಿದ್ದಾರೆ. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಬಗ್ಗೆಯು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಮಹಾದೇವಪ್ಪ, ಡಾ. ಎಂ.ಡಿ ಇಂದಿರಾ, ಡಾ. ರವೀಶ್‌ಗಣಿ, ಡಾ. ದೀಪ, ಡಾ. ಕಿರಣ್, ಡಾ. ಅರುಣ್ ತಾಲ್ಲೂಕು ಕಲ್ಯಾಣಾಧಿಕಾರಿ ಹೆಚ್.ಸಿ. ಬಸವರಾಜು, ಶೆಟ್ಟಿಹಳ್ಳಿ ಆಶ್ರಮಶಾಲೆಯ ಮುಖ್ಯಶಿಕ್ಷಕ ಎಂ.ಟಿ. ಶಿವಕುಮಾರ್, ಕೊಳವಿಗೆ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಸಣ್ಣಯ್ಯ, ಮೋಹನ್ ಚೇತನ್‌ಕುಮಾರ್, ಯೋಗೀಶ್, ರಾಜು ಕೆ.ಎಸ್., ಬಿ.ಎಸ್. ಶಿವಣ್ಣ, ಎಂ.ಎ. ಮಂಜುನಾಥ್, ಸುಬ್ಬೇಗೌಡ, ಶಂಕರ್, ರಾಜು ಕೆ.ಎಂ., ವಿಜಯ್, ರಾಜು ಉಪಸ್ಥಿತರಿದ್ದರು.
