ದಾವಣಗೆರೆ: ೨ಎ ಮೀಸಲಾತಿಗೆ ನ. ೧೦ ರಂದು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗುವುದು. ದಾವಣಗೆರೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸುವ ಮೂಲಕ ಪ್ರತಿಭಟನೆ ಮಾಡ್ತೇವಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ೨ ಎ ಮೀಸಲಾತಿ ಜೊತೆ ಲಿಂಗಾಯತ ಉಪಪಂಗಡಗಳನ್ನು ಸೇರಿಸಿ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸಲಾಗುವುದು. ಹಿಂದಿನ ಸರ್ಕಾರ ಮೀಸಲಾತಿ ಘೋಷಣೆ ಮಾಡಿತು. ಅದರೆ ನೀತಿ ಸಂಹಿತೆ ಹಿನ್ನೆಲೆ ಜಾರಿಯಾಗಲಿಲ್ಲ. ೨ಆ ಮೀಸಲಾತಿ ಆಗ ಅನುಷ್ಟಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಈ ಸರ್ಕಾರಕ್ಕೆ ಕೂಡ ಪಂಚಮಸಾಲಿ ಸಮಾಜದ ಋಣ ಇದೆ. ಸರ್ಕಾರದ ಮನೆ ಬಾಗಿಲಿಗೆ ಹೋಗಿ ಕೇಳುವುದಕ್ಕಿಂತ ಹೋರಾಟ ಮಾಡುವುದು ಲೇಸು ಎಂದು ಕೊಂಡಿದ್ದೇವೆ. ಸರ್ಕಾರ ಈಗ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂತು ಇಷ್ಟಲಿಂಗ ಪೂಜೆಯ ಮೂಲಕ ಪ್ರತಿಭಟನೆ ಶುರು ಮಾಡಲಾಗುವುದು ಎಂದು ತಿಳಿಸಿದರು.
ಈ ಸರ್ಕಾರ ಗ್ಯಾರೆಂಟಿ ಯೋಜನೆ ಬಗ್ಗೆ ಯೋಚಿಸದೇ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ, ನಮ್ಮ ಸಮುದಾಯಕ್ಕೆ ೨ಎ ಮೀಸಲಾತಿ ಕೊಡಿ ಎಂದು ಮನವಿ ಮಾಡುತ್ತೇವೆ. ಲೋಕಸಭೆ ಚುನಾವಣೆಯೊಳಗೆ ನಮಗೆ ಮೀಸಲಾತಿ ನೀಡಬೇಕು. ಇಲ್ಲವಾದರೆ ಲೋಕಸಭೆ ಚುನಾವಣೆಗೆ ಬಹಳ ಹೊಡೆತ ಬೀಳುತ್ತದೆ. ೨ ಎ ಮೀಸಲಾತಿಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲ ಕಡೆ ಸಭೆ ಮಾಡಿ ಜಾಗೃತಿ ಮೂಡಿಸಲಾಗುವುದು ಎಂದು ಸರ್ಕಾರಕ್ಕೆ ಕೂಡಲಸಂಗಮದ ಶ್ರೀಗಳು ಎಚ್ಚರಿಕೆ ನೀಡಿದರು.