ಮೈಸೂರು: 68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮತ್ತು ಮೈಸೂರು ರಾಜ್ಯ ಎಂಬುದನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ 50ನೇ ವರ್ಷದ ಸವಿ ನೆನಪಿನ ಹಿನ್ನೆಲೆಯಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಬಹಳ ಸಂಭ್ರಮ ಸಡಗರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಸಾಮೂಹಿಕವಾಗಿ ನಾಡಗೀತೆ ಹಾಡುವುದರ ಜೊತೆಗೆ ಎದ್ದುನಿಂತು ಗೌರವ ಸೂಚಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು. ಕಚೇರಿ ಕಟ್ಟಡಕ್ಕೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಿ ಹಸಿರು ತಳಿರು ತೋರಣ ಬಣ್ಣದ ಬಲೂನ್ ಗಳಿಂದ ಸಿಂಗರಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮುಖ್ಯ ಅಧಿಕಾರಿಗಳಾದ ಶ್ರೀ ಎ ಎಂ ಶ್ರೀಧರ್ ರವರು ಮಾತನಾಡುತ್ತಾ ಕರ್ನಾಟಕದ ಪ್ರತಿಯೊಬ್ಬ ನಾಗರಿಕರು ಸಹ ಕನ್ನಡ ಅಭಿಮಾನವನ್ನು ಹೆಚ್ಚು ಹೆಚ್ಚು ಬೆಳೆಸಿಕೊಳ್ಳಬೇಕು. ಕನ್ನಡವನ್ನು ಪ್ರೀತಿಸಿ, ಪೋಷಿಸಿ ಬೆಳೆಸಬೇಕು. ಹೆಚ್ಚುಹೆಚ್ಚು ಕನ್ನಡವನ್ನು ಮಾತಾಡುವುದರಿಂದ ಬಳಸುವುದರಿಂದ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ.
ಕನ್ನಡ ನೆಲ,ಜಲ ಭಾಷೆಯ ವಿಚಾರ ಬಂದಾಗ ಎಲ್ಲಾ ವೈಮನಸ್ಸುಗಳನ್ನು ಬದಿಗೊತ್ತಿ ಒಂದಾಗಿ ಹೋರಾಡಬೇಕು. ಕನ್ನಡಿಗ ಎಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ನೀರ ಬುಗ್ಗೆಯಂತೆ ಚಿಮ್ಬೇಕು. ರಕ್ತದ ಕಣಕಣದಲ್ಲೂ ಕನ್ನಡ ಅಭಿಮಾನ ಮೇಳೈಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕಗಳಿಗೆ 123 ಅಂಕಗಳನ್ನು ಪಡೆದಿರುವ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಪರಸಯ್ಯನ ಹುಂಡಿ ನಿವಾಸಿ ಶ್ರೀಮತಿ ಸೀತಾ ಲಕ್ಷ್ಮಿರವರ ಸುಪುತ್ರಿ “ವಿಶೇಷ ಚೇತನ ಬಡ ವಿದ್ಯಾರ್ಥಿ” ಕುಮಾರಿ ಎಂ ಸಿ ಭಾರ್ಗವಿರವರನ್ನು ವಿಶೇಷವಾಗಿ ಶಾಲುಹೊದಿಸಿ, ಮೈಸೂರು ಪೇಟ ತೊಡಿಸಿ, ಫಲ ತಾಂಬೂಲ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ಇಂದು ನಾಮಕರಣಗೊಂಡು ಐವತ್ತು ವರ್ಷ ತುಂಬಿದ ಪ್ರಯುಕ್ತ ಪಟ್ಟಣದ ಪ್ರತಿ ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ಕನ್ನಡದ ಬಾವುಟ ಹಾರಿಸಿ ಸಂಜೆ ದೀಪಗಳನ್ನು ಹಚ್ಚಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಿಳಿಸಲಾಯಿತು. ಕಚೇರಿಯ ಸಿಬ್ಬಂದಿಗಳಿಂದ ರಂಗೋಲಿ ಬಿಡುವುದು ಸಮೂಹ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡದ ಜಲವನ್ನು ಗೌರವಿಸುವ ಸಂಕೇತವಾಗಿ ಪಟ್ಟಣ ಪಂಚಾಯಿತಿಯ ನೀರು ಗಂಟಿಗಳನ್ನು ಶಾಲು ಹೊಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಧಿಕಾರಿಗಳಾದ ಶ್ರೀ ಎ ಎಂ ಶ್ರೀಧರ್, ಸಮುದಾಯ ಸಂಘಟನಾಧಿಕಾರಿ ಶ್ರೀನಿವಾಸ, ಕಿರಿಯ ಅಭಿಯಂತರರಾದ ಶಿವಕುಮಾರ್, ಆರೋಗ್ಯ ನಿರೀಕ್ಷಕರಾದ ಪರಮೇಶ್ವರ್, ಲೆಕ್ಕಿಗರಾದ ಸೌಮ್ಯ ,ಕಂದಾಯ ಶಾಖೆಯ ಕುಮಾರಸ್ವಾಮಿ, ಬಾಲಾಜಿ, ಪರಮೇಶ್, ನಮೃತ, ಪುಷ್ಪ, ಚಂದ್ರು, ಸಿಬ್ಬಂದಿಗಳಾದ ಛಾಯ ಚೈತ್ರ, ರಶ್ಮಿ ,ಸುಚಿತ್ರ, ಬಸವರಾಜು, ಶ್ರೀಕಂಠ ಪ್ರತಾಪ್, ಮೇಸ್ತ್ರಿ ಮುತ್ತು ಸ್ವಾಮಿ, ಜಯಮ್ಮ ಗ್ರಂಥಪಾಲಕಿ ಜಯಶ್ರೀ, ಪಿ ಎ ಸಿ ಸಿ ಎಸ್ ಸಿಇಓ ರವಿಕುಮಾರ್. ಎಂ, ಅಂಗನವಾಡಿ ಶಿಕ್ಷಕಿ ಸರಿತಾ, ಎಲ್ಲಾ ನೀರು ಗಂಟಿಗಳು, ಪೌರಕಾರ್ಮಿಕರು ಹಾಜರಿದ್ದರು. ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.