Sunday, April 20, 2025
Google search engine

Homeಸ್ಥಳೀಯಜಾಗತೀಕರಣದಿಂದ ಕನ್ನಡ ಭಾಷೆಗೆ ಕುತ್ತು: ಸಾಹಿತಿ ಟಿ. ಸತೀಶ್ ಜವರೇಗೌಡ

ಜಾಗತೀಕರಣದಿಂದ ಕನ್ನಡ ಭಾಷೆಗೆ ಕುತ್ತು: ಸಾಹಿತಿ ಟಿ. ಸತೀಶ್ ಜವರೇಗೌಡ

ಮೈಸೂರು : ಜಾಗತೀಕರಣ, ಉದಾರೀಕರಣ, ನಗರೀಕರಣದ ಜಾಲ ಎಲ್ಲೆಡೆ ಹರಡಿದೆ. ಈ ‘ತ್ರಿಕರಣ’ಗಳ ಪ್ರಭಾವದಿಂದಾಗಿ ಕನ್ನಡ ಭಾಷೆಗೆ ಮತ್ತು ಕನ್ನಡಿಗರ ಉದ್ಯೋಗಕ್ಕೆ ಧಕ್ಕೆ ಒದಗಿದೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಆತಂಕ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಆಯರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಕಲರವ ಕನ್ನಡ ಸಪ್ತಾಹ ಅಂಗವಾಗಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕವಿನಮನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಪರಭಾಷೆಗಳ ಅಬ್ಬರದಿಂದ ಕನ್ನಡದ ಬನಿ ಮತ್ತು ದನಿ ಕುಗ್ಗುತ್ತಿದೆ. ದಿನನಿತ್ಯ ಬಳಸುವ ಕನ್ನಡ ಭಾಷೆಯಲ್ಲಿ ಬೇರೆ ಭಾಷೆಗಳ ಪದಗಳನ್ನು ಬಳಸಿ ಮಾತನಾಡುವುದರಿಂದ ಭಾಷೆಯ ಶುದ್ಧತೆ ನಾಶವಾಗುತ್ತಿದೆ. ಇಂತಹ ಹೊತ್ತಿನಲ್ಲಿ ನಮ್ಮ ಹೃದಯದ ಭಾಷೆಯಾಗಿರುವ ಕನ್ನಡದ ದೇಸಿತನವನ್ನು ಜತನ ಮಾಡಬೇಕೆಂದರು. ಪ್ರಾಚೀನತೆಯ ಪರಂಪರೆಯ ಜೊತೆಗೆ ಶಾಸ್ತ್ರೀಯ ಸ್ಥಾನ ಮಾನ ಹೊಂದಿರುವ ಕನ್ನಡ ಭಾಷೆ ಇಡೀ ಜಗತ್ತಿಗೆ ‘ಮನುಷ್ಯ ಜಾತಿ ತಾನೊಂದ ವಲಂ ಹಾಗೂ ಮನುಜ ಮತ ವಿಶ್ವಪಥ ಸಂದೇಶ’ವನ್ನು ಜಗತ್ತಿಗೆ ಸಾರಿದ ಹಿರಿಮೆಯನ್ನು ಹೊಂದಿದೆ. ಆದರೆ, ಕನ್ನಡಿಗರ ಪರಭಾಷೆಯ ವ್ಯಾಮೋಹ, ನಿರಾಭಿಮಾನತೆ ಮತ್ತು ಅನಾದರ ಭಾವನೆಯಿಂದಾಗಿ ನಮ್ಮ ಸಮೃದ್ಧ ಭಾಷೆಯ ಬೇರುಗಳು ಸಡಿಲವಾಗುತ್ತಿವೆ ಎಂದು ಕಳವಳಪಟ್ಟರು.

ಕಿರುತೆರೆ ಮತ್ತು ರಂಗಭೂಮಿ ಕಲಾವಿದೆ ದೀಪಾ ರವಿಶಂಕರ್ ಮಾತನಾಡಿ, ಬೆಂಗಳೂರು ಮಹಾನಗರದಲ್ಲಿ ಪರಭಾಷಿಕರ ಹಾವಳಿ ಹೆಚ್ಚಿದೆ. ಅಲ್ಲಿ ಕನ್ನಡ ಭಾಷೆ ಮಾತನಾಡುವವರು ಶೇ. ೩೭ ರಷ್ಟು ಮಾತ್ರ ಇದ್ದಾರೆ. ಹಾಗಾಗಿ ಕನ್ನಡ ಭಾಷಿಕರು ಅಲ್ಪ ಸಂಖ್ಯಾತರಾಗುತ್ತಿದ್ದಾರೆ ಎಂದು ಆತಂಕಪಟ್ಟರು. ಟಿವಿ ಮತ್ತು ಸಿನಿಮಾ ಕಲಾವಿದರು ಕನ್ನಡವನ್ನು ಇಂಗ್ಲಿಷ್ ಥರಾ ಮಾತನಾಡುತ್ತಾರೆ. ಕನ್ನಡವನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡುವುದಿಲ್ಲ. ಈ ಪ್ರವೃತ್ತಿ ಹೆಣ್ಣುಮಕ್ಕಳು ಮತ್ತು ಮಹಿಳೆಯರಲ್ಲಿ ಹೆಚ್ಚು. ಕನ್ನಡವನ್ನು ಸ್ಪಷ್ಟವಾಗಿ ಕಲಿತು ಉತ್ಕೃಷ್ಟವಾಗಿ ಬಳಸುವ ಅಭಿಮಾನ ತೋರಬೇಕೆಂದು ಸಲಹೆ ನೀಡಿದರು.

ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಕನ್ನಡ ಮತ್ತು ಸಾಂಸ್ಕೃತಿಕ ಸಮಿತಿಯ ಸಲಹೆಗಾರ್ತಿ ಮತ್ತು ಪ್ರಾಧ್ಯಾಪಕಿ ಡಾ.ಎನ್. ನಳಿನಿ, ಸಮಿತಿಯ ಕಾರ್ಯದರ್ಶಿಗಳಾದ ಬಿ. ಗಣೇಶ್ ಪ್ರಸಾದ್, ಕೆ. ಭಾಗ್ಯಶೀ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಟಿ. ಸತೀಶ್ ಜವರೇಗೌಡ ಹಾಗೂ ಕಿರುತೆರೆ ಕಲಾವಿದೆ ದೀಪಾ ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ವಿದ್ಯಾರ್ಥಿಗಳಿಂದ ಜಾನಪದ ಗೀತೆ, ದಾಸರ ಪದ, ಭಾವಗೀತೆ, ವಚನ ಗಾಯನ, ಕವನ ವಾಚನ ಸ್ಪರ್ಧೆ ನಡೆಯಿತು. ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡದ ಕಂಪು ಉಕ್ಕುತ್ತಿದದ್ದು ವಿಶೇಷವಾಗಿತ್ತು.

RELATED ARTICLES
- Advertisment -
Google search engine

Most Popular