ನಾಗರಹೊಳೆ : ಶನಿವಾರ ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿಗಳು ಸೊಳ್ಳೆಪುರ ಅರಣ್ಯದ ಮಂಟಳ್ಳಿ ಬೀಳು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ೫೦ ವರ್ಷದ ಗಂಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಸೆರೆ ಹಿಡಿಯಲಾದ ಆನೆಯು ಕಳೆದ ಹಲವು ತಿಂಗಳಿಂದ ವೀರನಹೊಸಹಳ್ಳಿ ಅರಣ್ಯದಂಚಿನಲ್ಲಿ ದಾಂದಲೆ ನಡೆಸಿ ರೈತರ ಫಸಲು ನಷ್ಟ ಮಾಡುತ್ತಿತ್ತು. ಆನೆಯನ್ನು ಬಂಧಿಸುವಲ್ಲಿ ಇಲಾಖೆ ಮೂರು ದಿನದಿಂದ ಅಭಿಮನ್ಯು, ಮಹೇಂದ್ರ, ಭೀಮ (ಮಹಾರಾಷ್ಟ್ರ) ಭೀಮ (ಕರ್ನಾಟಕ), ಹರ್ಷ, ಅಶ್ವತ್ಥಾಮ ಆನೆಗಳ ಸಹಾಯ ಪಡೆದು ೭೦ ಸಿಬ್ಬಂದಿಗಳ ಸಮೇತ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ನಾಗರಹೊಳೆ ಸಹಾಯಕ ನಿರ್ದೇಶಕ ಧನಂಜಯ ಹೇಳಿದ್ದಾರೆ. ಸೆರೆಹಿಡಿದ ಆನೆ ಅಭಿಮನ್ಯು ಗಿಂತಲೂ ದೊಡ್ಡದಾಗಿದ್ದು, ಇದನ್ನು ಪಳಗಿಸಲು ಮತ್ತಿಗೋಡು ಆನೆ ಶಿಬಿರಕ್ಕೆ ಕಳುಹಿಸಲಾಗುವುದು ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.