ಮೈಸೂರು: ಮೈಸೂರು ತಾಲ್ಲೂಕು, ಲಿಂಗದೇವರು ಕೊಪ್ಪಲು ವೃತ್ತದ ಬಳಿ ಗ್ರಾಮಸ್ಥರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿದರು. ಲಿಂಗದೇವರು ಕೊಪ್ಪಲು ಬಳಿ ಇರುವ ಮೈಸೂರು ಇಲವಾಲ ರಸ್ತೆಯ ವೃತ್ತದಲ್ಲಿ ಲಿಂಗದೇವರಕೊಪ್ಪಲು ಹಾಗೂ ಇಲವಾಲ ಹೋಬಳಿಯ ಮುಖಂಡರು ಸೇರಿ ಸಿದ್ದರಾಮಯ್ಯ ವೃತ್ತ ಎಂಬ ನಾಮಫಲಕವನ್ನು ಅಳವಡಿಸಿದ್ದರು. ಪೊಲೀಸರು ಈ ನಾಮಫಲಕವನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದರಿಂದ ಗ್ರಾಮಸ್ಥರು ಪೊಲೀಸರ ವಿರುದ್ಧರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಗೋಪಿ ಮಾತನಾಡಿ ಮೈಸೂರಿನ ರಿಂಗ್ ರಸ್ತೆಯಲ್ಲಿ ಅವರಿಗೆ ಇಷ್ಟಬಂದ ಹಾಗೆ ನಾಮಫಲಕಗಳನ್ನು ಅಳವಡಿಸಿದ್ದಾರೆ. ಅವರಿಗೆ ಅಡ್ಡಿಪಡಿಸದ ನ್ಯಾಷನಲ್ ಹೈವೆ ಅಧಿಕಾರಿಗಳು ಹಾಗೂ ಪೊಲೀಸರು ಈ ರಾಜ್ಯದ ಮುಖ್ಯಮಂತ್ರಿಯ ಹೆಸರಿನ ನಾಮಫಲಕವನ್ನು ತೆರವುಗೊಳಿಸಿದ್ದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ ಅವರು ಕೂಡಲೇ ನಾಮಫಲಕವನ್ನು ಕೊಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಕರೀಗೌಡ ಮಾತನಾಡಿ ಸಿದ್ದರಾಮಯ್ಯರವರ ನಾಮಫಲಕ ಅಳವಡಿಕೆಗೆ ಯಾರ ವಿರೋಧವು ಇಲ್ಲದಿದ್ದರೂ ಸಹ ಪೊಲೀಸರು ರಾತ್ರೋರಾತ್ರಿ ನಾಮಫಲಕ ತೆರವುಗೊಳಿಸಿರುವುದು ಖಂಡನೀಯ. ಕಾನೂನುಪ್ರಕಾರವೇ ಸಿದ್ದರಾಮಯ್ಯ ವೃತ್ತದ ನಾಮಫಲಕವನ್ನು ಅಳವಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಅರುಣ್‌ಕುಮಾರ್, ಹಳೇಕಾಮನಕೊಪ್ಪಲು ಕರೀಗೌಡ, ಗಾಂಧಿಕುಮಾರ, ವಕೀಲ ನಾಗೇಶ್, ಹಿನಕಲ್ ಉದಯ್, ಸೆಂಟ್ರಿಂಗ್ ರವಿಕುಮಾರ್, ಶಿವೇಗೌಡ, ಯೋಗೇಶ್, ಮಂಜು, ರಮೇಶ್, ಮಲ್ಲೇಶ್, ಮಟನ್ ಬಸವೇಗೌಡ, ರಾಜೇಶ್ ಹಾಜರಿದ್ದರು.