ಬೆಂಗಳೂರು : ಮನೆಗೆ ನುಗ್ಗಿ ಗಣಿ-ಭೂವಿಜ್ಞಾನ ಇಲಾಖೆಯ ಅಧಿಕಾರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಣಿ-ಭೂವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ (೩೭) ಕೊಲೆಯಾದ ಅಧಿಕಾರಿ. ಪತಿಯಿಂದ ವಿಚ್ಛೇದನ ಪಡೆದು ಪ್ರತಿಮಾ ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಪತಿ ಮತ್ತು ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೆಲೆಸಿದ್ದಾರೆ. ನಿನ್ನೆ (ನ.೦೪) ರಾತ್ರಿ ಪ್ರತಿಮಾ ಅವರ ಮನೆಗೆ ನುಗ್ಗಿ ಪರಾರಿಯಾಗಿದ್ದಾರೆ.
ಪ್ರತಿಮಾ ಶನಿವಾರ ರಾತ್ರಿ ೮ ಗಂಟೆಗೆ ಇಲಾಖೆಯ ವಾಹನದಲ್ಲಿ ಕಚೇರಿಯಿಂದ ಮನೆಗೆ ಬಂದಿದ್ದರು. ರಾತ್ರಿ ಅಣ್ಣ ಕರೆ ಮಾಡಿದಾಗ ಸ್ವೀಕರಿಸಿ ಮಾತನಾಡಿದ್ದರು. ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರತಿಮಾ ನೆಲೆಸಿದ್ದ ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.