ಬೆಂಗಳೂರು: ಜೆಡಿಎಸ್ ನಾಯಕರ ಬರ ಅಧ್ಯನಯನ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ರೈತ ಸಾಂತ್ವನ ಯಾತ್ರೆ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ ಎಂದು ಹೇಳಿದ್ದಾರೆ.
ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಅವರು ತಿಳಿಸಿದ್ದಾರೆ. ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೆಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೊಸ ಬೆಳವಣಿಗೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜೊತೆ ತಮ್ಮ ಪಕ್ಷದ ಮೈತ್ರಿಗೆ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಜೊತೆ ಆತ್ಮೀಯವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ ಎಂದರು.