ಕೆ.ಆರ್.ನಗರ: ಹದಿಮೂರು ಗ್ರಾಮಗಳಿಗೆ ಸೇರಿದ ಶ್ರೀ ಲಕ್ಷಿಮದೇವಿ ದೇವಸ್ಥಾನದ ಕಾಮಗಾರಿ ಪೂರ್ಣಗೊಳ್ಳಲು ಬೇಕಾಗಿರುವ ೩೦ ಲಕ್ಷ ಅನುದಾನ ಕೊಡಿಸಿ, ದೇವಾಲಯದ ಕಟ್ಟಡವನ್ನು ಲೋಕಾರ್ಪಣೆ ಮಾಡಲು ಶ್ರಮಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಅಡಗನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಶಾಸಕರ ನಿಧಿಯಿಂದ ೫ ಲಕ್ಷ ರೂ ಮಂಜೂರು ಮಾಡಲಾಗಿದ್ದು ಆನಂತರ ಪಕ್ಷದ ವಿಧಾನ ಪರಿಷತ್ ಸದಸ್ಯರು ಮತ್ತು ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಗ್ರಾಮದ ಹೆಬ್ಬಾಗಿಲಿನಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಜೀರ್ಣೋದ್ದಾರಕ್ಕೆ ಇಲಾಖೆ ವತಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ ಎಂದರಲ್ಲದೆ ದೇವಾಲಯದ ಅರ್ಚಕರಿಗೆ ಮಾಸಿಕ ವೇತನ ಮಂಜೂರು ಮಾಡುವಂತೆ ತಹಶೀಲ್ದಾರ್‌ರವರಿಗೆ ಸೂಚಿಸುವುದಾಗಿ ತಿಳಿಸಿದರು. ಹದಿಮೂರು ಗ್ರಾಮಗಳಿಗೆ ಸೇರಿದ ದೇವಾಲಯದ ಕಾಮಗಾರಿ ಪೂರ್ಣಗೊಳಿಸಲು ಬದ್ದನಾಗಿದ್ದೇನೆ ಎಂದು ಹೇಳಿದ ಶಾಸಕರು ಗ್ರಾಮಸ್ಥರು ದೇವಾಲಯ ಲೋಕಾರ್ಪಣೆಗೊಂಡ ನಂತರ ಸಾಂಪ್ರದಾಯದಂತೆ ದೇವರಿಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದಲ್ಲದೆ ಗ್ರಾಮಗಳ ಯಜಮಾನರುಗಳು ಪರಸ್ಪರ ಹೊಂದಾಣಿಕೆಯಿಂದ ದೇವರ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಲು ನಿರ್ಧರಿಸಲಾಗಿದ್ದು ಆನಂತರ ಅಡಗನಹಳ್ಳಿ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಆಗಬೇಕಾಗಿರುವ ಅಭಿವೃದ್ದಿ ಕೆಲಸಗಳ ಪಟ್ಟಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ಗ್ರಾಮದ ಮುಖ್ಯ ರಸ್ತೆಯನ್ನು ಡಾಂಬರೀಕರಣ ಮಾಡಿಸಿಕೊಡಲಾಗುತ್ತದೆ ಎಂದು ಹೇಳಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ್‍ನನಹಳ್ಳಿ ಶಿವಣ್ಣ, ನಿರ್ದೇಶಕ ಅಪ್ಪಾಜಿಗೌಡ, ಪುರಸಭೆ ಸದಸ್ಯ ನಟರಾಜು, ದೊಡ್ಡೇಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಮಾರ್ಕ್ಮಹದೇವ್, ಅರ್ಕೇಶ್ವರ ಸ್ಪೂರ್ಟ್ ಕ್ಲಬ್ ಅಧ್ಯಕ್ಷ ವೆಂಕಟೇಗೌಡ, ಮಾಜಿ ಅಧ್ಯಕ್ಷ ರಾಮೇಗೌಡ, ದೇವಾಲಯದ ಅರ್ಚಕರಾದ ರಾಜಣ್ಣ, ಮಾದಪ್ಪ, ಕೃಷ್ಣೇಗೌಡ, ಹದಿಮೂರು ಗ್ರಾಮಗಳ ಮುಖಂಡರಾದ ಚನ್ನಕೇಶವ, ಪ್ರಕಾಶ್, ಬಸವೇಗೌಡ, ಕುಮಾರ್, ಸಿದ್ದಲಿಂಗೇಗೌಡ, ಚಂದ್ರೇಗೌಡ, ಮಾರೇಗೌಡ, ಸಿದ್ದೇಗೌಡ, ಪಪೇಗೌಡ, ಪುಟ್ಟಸ್ವಾಮಿಗೌಡ, ಸಣ್ಣತಮ್ಮೇಗೌಡ, ಎಳನೀರುಮಹದೇವ್, ಕಾಳಿಕುಮಾರ್, ಮಂಜುನಾಥ್, ಜಯಣ್ಣ ಮತ್ತಿತರರು ಹಾಜರಿದ್ದರು.
ಕಳೆದ ಬಿಜೆಪಿ ಸರ್ಕಾರ ವಿಧಾನ ಸಭೆ ಚುನಾವಣೆಗೂ ಮುನ್ನ ೬ ತಿಂಗಳ ಅವಧಿಯಲ್ಲಿ ಮುಂದಿನ ಒಂದು ವರ್ಷಕ್ಕಾಗುವಷ್ಠು ಕ್ರಿಯಾ ಯೋಜನೆ ಮಾಡಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿದ್ದಾರೆ ಇವುಗಳಿಗೆ ಹಣ ಒದಗಿಸುವುದರ ಜತೆಗೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೂ ಹಣ ನೀಡಬೇಕಾಗಿರುವುದರಿಂದ ಸರ್ಕಾರಕ್ಕೆ ಹೊರೆಯಾಗಿದ್ದು ಕೇಳಿದಷ್ಟು ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ.
-ಶಾಸಕ ಡಿ.ರವಿಶಂಕರ್